ಹಿರೀಸಾವೆ ಹೋಬಳಿ ಹೊನ್ನಶೆಟ್ಟಿಹಳ್ಳಿ ಗ್ರಾಮದ ರಂಗದ ಬೀದಿಯಲ್ಲಿ ಶಿಥಿಲಗೊಂಡಿರುವ ತೆರೆದ ರಾಟೆ ಬಾವಿ.  
ಜಿಲ್ಲೆ

ದುಸ್ಥಿತಿಯಲ್ಲಿ ತೆರೆದ ಬಾವಿ

ಹಿರೀಸಾವೆ: ಕಳೆದ 51 ವರ್ಷಗಳಿಂದ ಗ್ರಾಮದ ಕುಡಿಯುವ ನೀರಿಗೆ ಆಶ್ರಯವಾಗಿದ್ದ ತೆರೆದ ಬಾವಿಯ(ರಾಟೆ ಬಾವಿ) ಮೇಲ್ಭಾಗದ ತಡೆಗೋಡೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಕುಸಿದು ಬೀಳುವ ಹಂತದಲ್ಲಿದೆ.

ಹಿರೀಸಾವೆ ಹೋಬಳಿಯ ಬಾಳಗಂಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಶೆಟ್ಟಿಹಳ್ಳಿ ಗ್ರಾಮದ ರಂಗದ ಬೀದಿಯಲ್ಲಿರುವ ತೆರೆದ ಬಾವಿಯನ್ನು 1972ರಲ್ಲಿ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುವ ಸಲುವಾಗಿ ನಿರ್ಮಾಣಗೊಳಿಸಿದ್ದು, ಕೇವಲ 70 ಅಡಿ ಆಳ ಹೊಂದಿದೆ. ಬಾವಿಯಲ್ಲಿ ಈಗಲೂ 15 ರಿಂದ 20 ಅಡಿಯಷ್ಟು ಮೇಲ್ಭಾಗದಲ್ಲಿಯೇ ನೀರಿದೆ.

1970ರ ಸುಮಾರಿನಲ್ಲಿ ಈ ವ್ಯಾಪ್ತಿಯಾದ್ಯಂತ ತೀವ್ರ ಬರಗಾಲ ಎದುರಾದ ಸಂದರ್ಭದಲ್ಲಿ ಹೊನ್ನಶೆಟ್ಟಿಹಳ್ಳಿ ಗ್ರಾಮಸ್ಥರು ಅಂದಿನ ಸರ್ಕಾರದ ಮೊರೆ ಹೋಗಿ ಕುಡಿಯುವ ನೀರಿಗಾಗಿ ಗ್ರಾಮದಲ್ಲಿ ತೆರೆದ ಬಾವಿಯೊಂದನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದರು. 1971ರಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಗ್ರಾಮದ ಹೆಬ್ಬಾಗಿಲ ಬಳಿ ಸ್ಥಳ ಗುರುತಿಸಿ ಗ್ರಾಮಸ್ಥರ ಸಹಕಾರದೊಂದಿಗೆ ಕಾಮಗಾರಿ ಆರಂಭಿಸಿದ್ದು, ಉತ್ತಮವಾಗಿ ಜಲ(ಯೋಗ್ಯ ಕುಡಿಯುವ ನೀರು) ಕಂಡುಬಂದ ಹಿನ್ನೆಲೆಯಲ್ಲಿ 1972 ರಲ್ಲಿ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆಗೊಳಿಸುವ ಮೂಲಕ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ್ದರು ಎನ್ನಲಾಗಿದೆ.

ಈ ಬಾರಿ ಪೂರ್ವ ಮುಂಗಾರಿನಿಂದಲೂ ಮಳೆಯಾಗದೆ ಈ ವ್ಯಾಪ್ತಿಯಲ್ಲಿ ಬರ ಪರಿಸ್ಥಿತಿ ಇದ್ದರೂ ಈಗಲೂ ಸಾಕಷ್ಟು ಪ್ರಮಾಣದಲ್ಲಿ ನೀರು ಇದೆ. ಮೇಲ್ಭಾಗದ ತಡೆಗೋಡೆ ದುರಸ್ತಿಯೊಂದಿಗೆ ರಾಟೆಗಳನ್ನು ಅಳವಡಿಸಿ ಸಂಗ್ರಹಗೊಂಡಿರುವ ತ್ಯಾಜ್ಯ ಹಾಗೂ ಹೂಳು ತೆಗೆದು ಸ್ವಚ್ಛಗೊಳಿಸಿದರೆ ಗ್ರಾಮದ ಕುಡಿಯುವ ನೀರಿಗೆ ಬಾವಿ ಸಂಪೂರ್ಣ ಬಳಕೆಯಾಗಲಿದೆ.

ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಅರ್ಜಿ ಸಲ್ಲಿಸಲಾಗಿದ್ದು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಶೀಘ್ರದಲ್ಲಿಯೇ ಬಾವಿಯ ಪುನಶ್ಚೇತನ ಕಾರ್ಯವನ್ನು ಕೈಗೊಂಡು ದುರಸ್ತಿಗೊಳಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.