ಶೃಂಗೇರಿ: ನವರಾತ್ರಿ ಮಹೋತ್ಸವ ಅಂಗವಾಗಿ ಭಾನುವಾರ ಶ್ರೀಮಠದಲ್ಲಿ ಶಾರದಾ ಪರಮೇಶ್ವರಿ ಮೋಹಿನಿ ಅಲಂಕಾರದಲ್ಲಿ ಕಂಗೊಳಿಸಿದಳು. ಜಗನ್ಮಾತೆ ಅಮೃತಕಲಶ ಹಿಡಿದು ರೂಪ, ಲಾವಣ್ಯಗಳಿಂದ ರಾಕ್ಷಸರನ್ನು ಮೋಹಗೊಳಿಸಿ ದೇವತೆಗಳಿಗೆ ಅಮೃತ ಲಭಿಸುವಂತೆ ಮಾಡಿದ ಅಲಂಕಾರ ತುಂಬ ಆಕರ್ಷಕವಾಗಿತ್ತು.
ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದಗಳ ಹಾಗೂ ದುರ್ಗಾಸಪ್ತಶತಿ, ಲಕ್ಷ್ಮೀನಾರಾಯಣ ಹೃದಯ, ಸೂತಸಂಹಿತೆ ಪಾರಾಯಣಗಳು, ಸೂರ್ಯನಮಸ್ಕಾರ, ಶ್ರೀಸೂಕ್ತ ಜಪ, ದುರ್ಗಾಜಪ, ಭುವನೇಶ್ವರಿ ಜಪ ಮಠದಲ್ಲಿ ನೆರವೇರಿದವು. ಸುವಾಸಿನೀ ಹಾಗೂ ಕುಮಾರೀಪೂಜೆ ಜರುಗಿತು. ಜಗದ್ಗುರುಗಳು ಶ್ರೀ ಶಾರದಾ ಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಪ್ರವಚನ ಮಂದಿರದಲ್ಲಿ ಯತಿವರ್ಯರ ಸಮ್ಮುಖದಲ್ಲಿ ಶ್ರೀ ಶಾರದೆಗೆ ಡೋಲೋತ್ಸವ ನೆರವೇರಿತು. ಬಳಿಕ ಶ್ರೀ ಚಂದ್ರಮೌಳೀಶ್ವರರಿಗೆ ವಿಶೇಷ ಪೂಜೆ ನೆರವೇರಿತು.
ಬೀದಿ ಉತ್ಸವದಲ್ಲಿ ಬೇಗಾರು ಗ್ರಾಪಂ ವ್ಯಾಪ್ತಿಯ ಭಕ್ತಾದಿಗಳು ಭಾಗವಹಿಸಿದ್ದರು. ಶ್ರೀರಾಮ ದೇವಸ್ಥಾನ, ಶ್ರೀ ಗಣಪತಿ ಆಂಜನೇಯ ಹಾಗೂ ಶ್ರೀ ಸೋಮೇಶ್ವರ ದೇವಾಲಯ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಶ್ರೀ ಗುತ್ಯಮ್ಮ ಮಾತಂಗಿ ದೇವಸ್ಥಾನ ಹಾಗೂ ವಿವಿಧ ದೇವಸ್ಥಾನದ ಸೇವಾ ಸಮಿತಿಗಳು, ಕುಲಾಲ ಹಾಗೂ ಮೊಗವೀರ ಸಂಘ, ರಾಜ್ಯ ಸರ್ಕಾರಿ ನೌಕರರ ಸಂಘ, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹರಿನಮದ್ವಾರ್ ಮತ್ತು ವೃಂದ ಅವರಿಂದ ನಾಮಸಂಕೀರ್ತನೆ ನೆರವೇರಿತು.
ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ಕಿರೀಟ, ಆಭರಣಗಳನ್ನು ಧರಿಸಿ ಶ್ರೀ ಶಾರದಾ ದೇವಾಲಯಕ್ಕೆ ಉತ್ಸವದಲ್ಲಿ ಆಗಮಿಸಿದರು. ಯತಿವರ್ಯರು ದೇವಾಲಯ ಪ್ರವೇಶಿಸಿದ ಬಳಿಕ ಬಂಗಾರರಥದಲ್ಲಿ ಶ್ರೀಶಾರದೆ ಉತ್ಸವಮೂರ್ತಿಯನ್ನು ಕುಳ್ಳಿರಿಸಿ ದೇವಾಲಯದ ಒಳಪ್ರಕಾರದಲ್ಲಿ ಮೂರು ಸುತ್ತು ವೇದ, ವಾದ್ಯ ಘೋಷಗಳೊಂದಿಗೆ ರಥೋತ್ಸವ ನೆರವೇರಿತು. ಶ್ರೀ ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಯತಿಗಳು ಆಸೀನರಾದ ಬಳಿಕ ಸಪ್ತಶತಿ ಪಾರಾಯಣ, ಜಗನ್ಮಾತೆಗೆ ಮಹಾಮಂಗಳಾರತಿ, ವೇದಗಳ ಪಾರಾಯಣ, ಸರ್ವಸಂಗೀತ ಹಾಗೂ ವಾದ್ಯ ಸೇವೆ, ಪ್ರಸಾದ ವಿನಿಯೋಗ ಮುಂತಾದ ಧಾರ್ಮಿಕ ವಿಧಿಗಳು ನೆರವೇರಿದವು.