ಹೊಳೆನರಸೀಪುರ: ಪಟ್ಟಣದ ಕೋಟೆ ಬೀದಿಯಲ್ಲಿ ದುಷ್ಕರ್ಮಿಗಳು ಸೋಮವಾರ ರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಬೈಕ್ ಹಾಗೂ ಮನೆ ಬಾಗಿಲು ಸುಟ್ಟು ಹೋಗಿದೆ.
ಪಟ್ಟಣದ ಒಕ್ಕರಣೆ ಬಾವಿ ಬೀದಿ ನಿವಾಸಿ ಪುಟ್ಟರಾಜು ಅವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಮೊದಲ ಮಹಡಿಯಲ್ಲಿ ರಮೇಶ್ ಅವರು ಬಾಡಿಗೆ ಇದ್ದು ರಾತ್ರಿ ಮಲಗಿದ ವೇಳೆ ಯಾರೋ ಕಿಡಿಗೇಡಿಗಳು ಮನೆ ಬಾಗಿಲಿಗೆ ಮತ್ತು ಮನೆ ಮುಂಭಾಗ ನಿಲ್ಲಿಸಿದ್ದ ಬೈಕಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಎಕ್ಸಿಸ್ 120 ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ವಾಸದ ಮನೆಯ ಬಾಗಿಲಿಗೂ ಬೆಂಕಿಯಿಂದ ಹಾನಿಯಾಗಿದ್ದು ನಷ್ಟ ಉಂಟಾಗಿದೆ.
ಬೈಕ್ ಹೊತ್ತಿ ಉರಿಯುತ್ತಿದ್ದನ್ನು ಕಂಡ ಮನೆಯವರು ಮನೆಯಿಂದ ಹೊರಗೆ ಬಂದು ಹೊತ್ತಿ ಉರಿಯುತ್ತಿದ್ದ ಬಾಗಿಲಿಗೆ ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಬೈಕ್ ಸುಟ್ಟು ಕರಕಲಾಗಿತ್ತು ಎಂದು ಪುಟ್ಟರಾಜ್ ತಿಳಿಸಿದ್ದಾರೆ.
ಬೈಕ್‌ನ ಪಕ್ಕದಲ್ಲೇ ನಿಂತಿದ್ದ ಕಾರುಗಳಿಗೆ ಯಾವುದೇ ಹಾನಿಯಾಗಿಲ್ಲ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.