ಚನ್ನರಾಯಪಟ್ಟಣ: ತಾಲೂಕಿನ ಆಲ್ಫೋಸ್‌ನಗರದ ನಿವಾಸಿ ಚಿನ್ನಪ್ಪ ಪುತ್ರ ಸಿ.ವಿನೋದ್ ಎಂಬುವರ ತೋಟದಲ್ಲಿ ಉಲುಸಾಗಿ ಬೆಳೆದಿದ್ದ 100ಕ್ಕೂ ಹೆಚ್ಚು ಅಡಕೆ ಸಸಿಗಳನ್ನು ದುಷ್ಕರ್ಮಿಗಳು ಕಡಿದು ನಾಶಪಡಿಸಿದ್ದಾರೆ.
ದಂಡಿಗನಹಳ್ಳಿ ಹೋಬಳಿ ನೊರನಕ್ಕಿ ಗ್ರಾಮದ ಸರ್ವೇ ನಂ.200/13ರಲ್ಲಿ 1.21 ಎಕರೆ ಜಮೀನು ಇದ್ದು ತೆಂಗಿನ ತೋಟದ ನಡುವೆ ನೂರಾರು ಅಡಕೆ ಸಸಿಗಳನ್ನು ನೆಟ್ಟು 3-4 ವರ್ಷಗಳಿಂದ ಆರೈಕೆ ಮಾಡಿ ಬೆಳೆಸಿದ್ದರು.
ವಿನೋದ್ ಹಾಗೂ ಅವರು ಕುಟುಂಬದವರು ಎಂದಿನಂತೆ ಭಾನುವಾರ ಸಂಜೆ ಕೆಲಸ ಮುಗಿಸಿ ಜಮೀನಿನಿಂದ ಮನೆಗೆ ತೆರಳಿದ್ದರು. ಸೋಮವಾರ ಬೆಳಗ್ಗೆ ತೋಟಕ್ಕೆ ಹೋದಾಗ ದುಷ್ಕರ್ಮಿಗಳು ಹಿಂದಿನ ರಾತ್ರಿಯೇ ಸಾಲು ಸಾಲು ಅಡಕೆ ಮರಗಳನ್ನು ಕಡಿದು ನಾಶ ಪಡಿಸಿರುವುದು ತಿಳಿದು ಬಂದಿದೆ.
ಪೂರ್ವ ಮುಂಗಾರಿನಿಂದಲೂ ವ್ಯಾಪಕವಾಗಿ ಸುರಿದ ಮಳೆಯಿಂದ ಬೆಳೆ ನಾಶವಾದರೆ, ಚಿರತೆ ಹಾವಳಿ ರೈತ ವರ್ಗವನ್ನು ಭಯದ ಕೂಪಕ್ಕೆ ತಳ್ಳಿತ್ತು. ಇದರ ನಡುವೆ ಬೆಳೆದು ಫಸಲು ಹಿಡಿಯುವ ಹಂತದಲ್ಲಿರುವ ಅಡಕೆ ಸಸಿಗಳನ್ನು ದುಷ್ಕರ್ಮಿಗಳು ನಾಶ ಮಾಡಿರುವ ಕೃತ್ಯ ನೋಡುಗರ ಮನ ಕಲಕುವಂತಿತ್ತು.
ವಿನೋದ್ ನೀಡಿದ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.