ಜಿಲ್ಲೆ

ದುಶ್ಚಟಮುಕ್ತ ಸಮಾಜ ಎಲ್ಲರ ಜವಾಬ್ದಾರಿ

ಕೆ.ಆರ್.ಪೇಟೆ: ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಮದ್ಯಪಾನ ಸೇರಿದಂತೆ ಮಾದಕ ವಸ್ತುಗಳ ಬಳಕೆಯಿಂದ ದೂರವಿರಬೇಕು ಎಂದು ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಅಭಿಪ್ರಾಯಪಟ್ಟರು.


ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳ ನೆರವಿನಿಂದ ಇತ್ತೀಚೆಗೆ ಆಯೋಜಿಸಿದ್ದ ಮದ್ಯವರ್ಜನ ಶಿಬಿರ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಆಧುನಿಕ ಜಗತ್ತಿನಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ನಮ್ಮ ದಾರಿ ತಪ್ಪಿಸುವ ಹಲವು ಅಂಶಗಳು ನಮ್ಮ ಸುತ್ತ ಗಿರಕಿ ಹೊಡೆಯುತ್ತವೆ. ಈ ಅಂಶಗಳ ಸಾಧಕ-ಬಾಧಕಗಳ ಮಹತ್ವ ಅರಿಯದೆ ಹೋಗುತ್ತಿರುವುದರಿಂದ ಸಮಾಜ ವ್ಯಸನಕ್ಕೆ ಶರಣಾಗುತ್ತಿದೆ. ಮನುಷ್ಯನಿಗೆ ಚಟಗಳು ಅನಿವಾರ್ಯ. ಆದರೆ, ಆ ಚಟಗಳೇ ನಮ್ಮ ಬದುಕನ್ನು ನಿಯಂತ್ರಿಸುವಂತಿರಬಾರದು ಎಂದು ಎಚ್ಚರಿಸಿದರು.


ಶಿಬಿರಾಧಿಕಾರಿ ಎಚ್.ಎಸ್.ನಾಗೇಂದ್ರ ಮಾತನಾಡಿದರು. ನವಜೀವನ ಪ್ರಶಸ್ತಿ ಪುರಸ್ಕೃತ ನುಗ್ಗೆಹಳ್ಳಿಯ ವಿ.ಪಿ.ಅಶ್ವತ್ಥ್, ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ, ಮೇಲ್ವಿಚಾರಕರಾದ ಮೀನಾ, ಕಾವ್ಯಾ ಲೋಕೇಶ್, ಪ್ರಕಾಶ್ ಇತರರಿದ್ದರು.