ಕಿಕ್ಕೇರಿ: ದುಶ್ಚಟದಿಂದ ಪ್ರಸ್ತುತ ಬಹುತೇಕರ ಬದುಕು, ಕುಟುಂಬ ಹಾಳಾಗುತ್ತಿದೆ ಎಂದು ಜನಜಾಗೃತಿ ವೇದಿಕೆ ನೂತನ ಜಿಲ್ಲಾಧ್ಯಕ್ಷ ಆರ್‌ಟಿಒ ಮಲ್ಲಿಕಾರ್ಜುನ ಬೇಸರ ವ್ಯಕ್ತಪಡಿಸಿದರು.
ಕಿಕ್ಕೇರಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿದರು.
ಮದ್ಯಪಾನ ಮನುಷ್ಯನ ಆರೋಗ್ಯ, ಕುಟುಂಬ ಹಾಳು ಮಾಡುವ ಕೆಟ್ಟ ಪಿಡುಗಾಗಿದೆ. ಇದರೊಂದಿಗೆ ತಂಬಾಕು, ಮಾದಕ ವಸ್ತು ಸೇವನೆ ಯುವ ಪೀಳಿಗೆಯನ್ನು ಸರ್ವನಾಶ ಮಾಡುತ್ತಿದೆ. ಯುವಕರು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಲು ಶಾಲಾ-ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮ ರೂಪಿಸುವುದು, ಮಹಿಳಾ ಸಂಕಲ್ಪ, ಮಾದಕ ವಸ್ತು ತಡೆಗಟ್ಟಲು ಜಾಗೃತಿ, ಮದ್ಯವರ್ಜನ ಶಿಬಿರ ರೂಪಿಸುವುದು, ದುಶ್ಚಟ, ದುರಾಭ್ಯಾಸದಿಂದ ಮುಕ್ತವಾಗಿಸಿ, ವ್ಯಸನಿಗಳನ್ನು ವ್ಯಸನದಿಂದ ಮುಕ್ತವಾಗಿಸಲು ಶ್ರಮಿಸಲಾಗುವುದು ಎಂದರು.
ಗಾಂಧೀಜಿಯ ಕನಸಿನ ಭಾರತವಾದ ಪಾನ ನಿಷೇಧ, ಗ್ರಾಮ ಸ್ವರಾಜ್ಯ ಪರಿಕಲ್ಪನೆಗೆ ಒತ್ತು ನೀಡಲಾಗುವುದು. ಡಾ.ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ರಾಜ್ಯದಲ್ಲಿ 40 ಜಿಲ್ಲಾ ಜನಜಾಗೃತಿ ವೇದಿಕೆಗಳಿವೆ. ರಾಜ್ಯಾದ್ಯಂತ 1890 ಮದ್ಯವರ್ಜನ ಶಿಬಿರ ಹಮ್ಮಿಕೊಳ್ಳಲಾಗಿದ್ದು, 1.5ಲಕ್ಷಕ್ಕೂ ಹೆಚ್ಚು ವ್ಯಸನಿಗಳನ್ನು ವ್ಯಸನ ಮುಕ್ತರನ್ನಾಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಾದೇಶಿಕ ನಿರ್ದೇಶಕ ಬಿ.ಜಯರಾಂ ನೆಲ್ಲಿತ್ತಾಯ, ಜಿಲ್ಲಾ ನಿರ್ದೇಶಕ ಎಂ.ಕೇಶವ ದೇವಾಂಗ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಮೊಟ್ಟೆಮಂಜು, ನಾರಾಯಣಸ್ವಾಮಿ, ಸುನೀತಾ ದಯಾನಂದ, ನಳಿನಾ, ನಿಕಟಪೂರ್ವ ಅಧ್ಯಕ್ಷ ಕೆ.ಆರ್.ರಾಜೇಶ್ ಮತ್ತಿತರರಿದ್ದರು.