ಹಾಸನ: ನಿಯಂತ್ರಣವಿಲ್ಲದ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಮದ್ಯಪಾನ ಮತ್ತು ಧೂಮಪಾನ, ಒತ್ತಡಯುಕ್ತ ಜೀವನ ಶೈಲಿ, ಕೊಬ್ಬಿನ ಆಹಾರ ಸೇವನೆ ಇತ್ಯಾದಿ ಆರೋಗ್ಯ ಸಮಸ್ಯೆ ಯಾರಲ್ಲಿದೆಯೋ ಅಂತಹವರಿಗೆ ಪಾರ್ಶ್ವವಾಯು ಬರುವ ಸಾಧ್ಯತೆ ಹೆಚ್ಚಿದೆ ಎಂದು ಸಮುದಾಯ ಆರೋಗ್ಯ ಕೇಂದ್ರ ದುದ್ದ ಪ್ರಭಾರ ಆಡಳಿತಾಧಿಕಾರಿ ಹಾಗೂ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ ಸೌಮ್ಯಾಶ್ರೀ ತಿಳಿಸಿದರು.
ದುದ್ದ ಸಮುದಾಯ ಆರೋಗ್ಯ ಕೇಂದ್ರ, ರೋಟರಿ ಕ್ಲಬ್ ಆಫ್ ಹಾಸನ ಟೈಗರ್, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರೋಟರಿ ಕ್ಲಬ್ ಆಫ್ ಹಾಸನ ಮಿಡ್‌ಟೌನ್ ಹಾಗೂ ದುದ್ದ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ದುದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಪಾರ್ಶ್ವವಾಯು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಹಾಸನ ಶಾಖೆಯ ಜಿಲ್ಲಾ ಸಂಯೋಜಕರಾದ ಎಂ.ಎಚ್. ಯೋಗನಾಥ್ ಮಾತನಾಡಿ, ಸ್ಟ್ರೋಕ್ ಮಾರಣಾಂತಿಕ ಮತ್ತು ಜೀವನಪೂರ್ತಿ ಅಂಗವೈಕಲ್ಯ ಉಂಟು ಮಾಡುವ ಗಂಭೀರ ಕಾಯಿಲೆಯಾಗಿದೆ. ಲಿಂಗಭೇದವಿಲ್ಲದೆ, ವಯಸ್ಸಿನ ಹಂಗಿಲ್ಲದೆ ಯಾರಿಗಾದರೂ ಈ ಕಾಯಿಲೆ ಬರಬಹುದು. ದೇಶದ ಮತ್ತು ಕುಟುಂಬ ಆಸ್ತಿಯಾದ ಯುವ ಜನಾಂಗ ಹೆಚ್ಚಾಗಿ ಸ್ಟ್ರೋಕ್ ರೋಗಕ್ಕೆ ಬಲಿಯಾಗುತ್ತಿರುವುದು ವಿಷಾದದ ಸಂಗತಿ. ಈ ಕಾಯಿಲೆ ತಡೆಗಟ್ಟಲು ಅತ್ಯುತ್ತಮ ಮಾರ್ಗವೆಂದರೆ ಆರೋಗ್ಯಯುತ ಜೀವನ ಶೈಲಿಯೊಂದಿಗೆ, ಆರೋಗ್ಯಕರ ಆಹಾರ ಸೇವಿಸುವುದು. ನಿಗದಿತ ವ್ಯಾಯಾಮ ಮಾಡುವುದು, ಧೂಮಪಾನ ಮತ್ತು ಮದ್ಯಪಾನದಿಂದ ಸಂಪೂರ್ಣವಾಗಿ ದೂರವಿರುವುದು, ಒತ್ತಡ ಕಡಿಮೆ ಮಾಡಿಕೊಳ್ಳುವುದು ಹಾಗೂ ಒಂದು ವೇಳೆ ಯಾರಿಗಾದರೂ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಇದ್ದರೆ ಚಿಕಿತ್ಸೆ ಪಡೆದು ನಿಯಂತ್ರಣದಲ್ಲಿಟ್ಟುಕೊಂಡರೆ ಸ್ಟ್ರೋಕ್ ಕಾಯಿಲೆ ಬರದಂತೆ ತಡೆಗಟ್ಟಬಹುದು ಎಂದರು.
ಆಯುಷ್ ವೈದ್ಯರಾದ ಡಾ. ಉಮೆ ಹರ್ಷಿಯಾ ಮಾತನಾಡಿ, ಸ್ಟ್ರೋಕ್ ಕಾಯಿಲೆಗೆ ಒಳಗಾಗಿರುವವರು ನಿಯಮಿತವಾಗಿ ಆಯುರ್ವೇದ ಆಯಿಲ್ ಮಸಾಜ್ ಮತ್ತು ಪಿಸಿಯೋಥೆರಪಿ ಮಾಡಿಸಿಕೊಂಡರೆ ಅಂಗ ವೈಕಲ್ಯತೆಯನ್ನು ಹಂತ ಹಂತವಾಗಿ ಸರಿಪಡಿಸಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ಯಾನ್ಸರ್, ಸ್ಟ್ರೋಕ್ ಮತ್ತು ಇನ್ನಿತರೆ ಮಾರಣಾಂತಿಕ ಹಾಗೂ ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿರುವ 30 ರೋಗಿಗಳಿಗೆ, ಒಬ್ಬರಿಗೆ 15 ಮೊಟ್ಟೆಗಳಂತೆ, 450 ಮೊಟ್ಟೆಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ದುದ್ದ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಈರಣಯ್ಯ, ಹಿಮ್ಸ್ ಪ್ಯಾಲಿಯೇಟಿವ್ ಕೇರ್ ಕಾರ್ಯಕ್ರಮದ ಗೃಹ ವೈದ್ಯರಾದ ಡಾ. ನಿಖಿಲ್ ಪಾಗಿ, ಹಿರಿಯ ಆರೋಗ್ಯಾಧಿಕಾರಿ ಎನ್.ಕೆ. ಸತೀಶ್ ಕುಮಾರ್, ರೋಟರಿ ಕ್ಲಬ್ ಆಫ್ ಹಾಸನ್ ಟೈಗರ್ ಕಾರ್ಯದರ್ಶಿ ಕಿರಣ್ ಮತ್ತು ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.