ಜಿಲ್ಲೆ

ದುಶ್ಚಟಗಳಿಂದ ಬದುಕು ನಾಶ

ಚಿತ್ರದುರ್ಗ: ವಿದ್ಯಾರ್ಥಿ ಸಮೂಹ ವಿದ್ಯಾಭ್ಯಾಸಕ್ಕೆ ಹೆಚ್ಚು ಮಹತ್ವ ನೀಡಬೇಕೆ ಹೊರತು ಮಾದಕ ವಸ್ತುಗಳ ಸೇವನೆಗೆ ಯಾವ ಕಾರಣಕ್ಕೂ ಒಳಗಾಗಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಸಲಹೆ ನೀಡಿದರು.

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಆರೋಗ್ಯ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಟಿಎಚ್‌ಒ ಕಚೇರಿ, ಸಂಸ್ಥೆಯಿಂದ ಡ್ರಗ್ಸ್ ಸೇವನೆಯಿಂದಾಗುವ ದುಷ್ಪರಿಣಾಮ, ಎನ್‌ಡಿಪಿಎಸ್ ಕಾಯ್ದೆ ಕುರಿತು ಶುಕ್ರವಾರ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಪಾತ್ರವೂ ಮಹತ್ವದ್ದಾಗಿದೆ. ಹೀಗಾಗಿ ಐಟಿಐ ವಿದ್ಯಾರ್ಥಿಗಳು ಸಿಗುವ ಅವಕಾಶ ಸದ್ಬಳಕೆ ಮಾಡಿಕೊಂಡು ಸುಂದರ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಒ.ನಾಗರಾಜ್ ಮಾತನಾಡಿ, ದುಶ್ಚಟಗಳಿಂದ ದೂರವಿರಿ. ಮಾದಕ ವಸ್ತುಗಳ ಸೇವನೆಯಿಂದ ಹೊರಬರಲು ಮನೋ ವೈದ್ಯರಿಂದ ಚಿಕಿತ್ಸೆ ಇದೆ. ಟೆಲಿ ಮಾನಸ 14416 ಉಚಿತ ಸಹಾಯವಾಣಿಗೆ ಕರೆ ಮಾಡಿ ಆಪ್ತ ಸಮಲೋಚನೆ ಪಡೆಯಬಹುದು ಎಂದು ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಮಾತನಾಡಿ, ದೇಶದಲ್ಲಿ ಶೇ 50 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಯುವಸಮೂಹವಿದೆ. ಆದರೆ, 18ರಿಂದ 20 ವರ್ಷದವರೇ ಹೆಚ್ಚಾಗಿ ಮಾದಕ ವಸ್ತುಗಳ ಸೇವನೆಗೆ ಒಳಗಾಗುತ್ತಿದ್ದಾರೆ. ಇದನ್ನು ತಡೆಯಲು ಮುಂದಾಗಬೇಕಿದೆ ಎಂದರು.

ಡಾ.ಆರ್.ಮಂಜುನಾಥ್ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ದೈಹಿಕ ಮತ್ತು ಮಾನಸಿಕವಾಗಿ ಅನೇಕ ಕಾಯಿಲೆಗಳನ್ನು ಆಹ್ವಾನಿಸಿಕೊಳ್ಳುವ ಬದಲು ಉತ್ತಮ ಆರೋಗ್ಯಕ್ಕಾಗಿ ದೂರವಿರಿ ಎಂದು ತಿಳಿಸಿದರು.

ಇದೇ ವೇಳೆ ಡ್ರಗ್ಸ್ ತ್ಯಜಿಸುವಂತೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಉಪ ಪ್ರಧಾನ ಕಾನೂನು ನೆರವು ಅಧಿಕಾರಿ ಎಂ.ಮೂರ್ತಿ, ತರಬೇತಿ ಸಂಸ್ಥೆಯ ಪ್ರಾಚಾರ್ಯ ಬಿ.ಸುರೇಶ್, ಟಿಎಚ್‌ಒ ಡಾ.ಬಿ.ವಿ.ಗಿರೀಶ್, ಕಿರಿಯ ತರಬೇತಿ ಅಧಿಕಾರಿಗಳಾದ ಬಿ.ಸತೀಶ್, ಆರ್.ತಿಮ್ಮಣ್ಣ, ಮಹಮದ್ ಕಾಜಾ ಹುಸೇನ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್, ಮೂಗಪ್ಪ, ನಿರೀಕ್ಷಣಾಧಿಕಾರಿ ಪ್ರವೀಣ್, ತಿಪ್ಪೇಶ್, ಶ್ರೀಧರ, ಕ್ಲಿನಿಕಲ್ ಸೈಕಾಲಜಿಸ್ಟ್ ಎನ್.ಸುನಿತಾ, ಸಾಮಾಜಿಕ ಕಾರ್ಯಕರ್ತೆ ಕೆ.ಎಂ.ರಶ್ಮಿ, ಶುಶ್ರೂಷಕಿ ರೂಪಾ, ಸಮುದಾಯ ಶುಶ್ರೂಷಾಧಿಕಾರಿ ಆರ್.ಅರುಣ ಕೀರ್ತಿ, ಶಿವರಾಜ್ ಇತರರಿದ್ದರು.