ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾಧನೆ ಸಾಧಕನ ಸೊತ್ತು. ಹೀಗಾಗಿ ವಿದ್ಯಾರ್ಥಿಗಳು ಆತ್ಮವಿಶ್ವಾಸದ ಮೂಲಕ ಶ್ರಮ ಪಟ್ಟು ಯಶಸ್ಸುಗಳಿಸಬೇಕು ಎಂದು ಬಾಬಾ ಸಾಹೇಬ ಶಿಕ್ಷಣ ಸಮಿತಿ ಕಾರ್ಯದರ್ಶಿ ರಾಜು ಕಲಾಲ ಹೇಳಿದರು.
ನಗರದ ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು ವತಿಯಿಂದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಮತ್ತು ವಿದ್ಯಾರ್ಥಿ ಒಕ್ಕೂಟಕ್ಕೆ ಚಾಲನೆ ಹಾಗೂ ಜ್ಞಾನ ಸಿರಿ-7 ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಲಿಕೆಯ ಸಮಯದಲ್ಲಿ ದುಶ್ಚಟಗಳಿಂದ ದೂರವಿದ್ದು, ಉತ್ತಮ ಶಿಕ್ಷಣ ಪಡೆಯಬೇಕು. ಸಮಯ ವ್ಯರ್ಥ ಮಾಡದೆ ಸಾಧನೆಯ ಹಾದಿಯಲ್ಲಿ ಸಾಗುವತ್ತ ಲಕ್ಷೃ ವಹಿಸಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಹ ಪಾಲ್ಗೊಂಡು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಮಾತನಾಡಿ, ವಿದ್ಯಾರ್ಥಿಗಳಿ ಈ ಕಾಲೇಜು ಬರೀ ಕಾಲೇಜು ಆಗಿರದೆ, ಒಂದು ಕುಟುಂಬದ ವಾತಾವರಣ ಹೊಂದಿರುವ ಮನೆಯಾಗಿದೆ. ಶ್ರದ್ಧೆಯಿಂದ ಎಲ್ಲ ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಮಹಾವಿದ್ಯಾಲಯಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷೆ ಡಾ. ವೀಣಾ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ಕಾಯಕವೇ ಕೈಲಾಸ ಎನ್ನುವಂತೆ ಶ್ರದ್ಧೆ ಹಾಗೂ ಶ್ರಮವಹಿಸಿ ಕೆಲಸ ಮಾಡಿದಾಗ ಯಶಸ್ಸು ದೊರೆಯಲಿದೆ. ಅಂತರಂಗ ಬಹಿರಂಗ ಶುದ್ಧ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶ್ರೀನಿವಾಸ ಸವಣೂರು ಮತ್ತು ದೀಪಾ ಕುಲಕರ್ಣಿ ಅವರಿಗೆ ಶ್ರೀ ಸಾಯಿ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. 2022-23ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಾವ್ಯಾ ನಿಂಬಾಳಕರ, ಪೂರ್ಣಿಮಾ ಚಿಕ್ಕಮಠ, ಚನ್ನರಾಜ ಪರಮೇಶ್ವರ, ಆಕಾಶ ಹಿಪ್ಪರಗಿ ಅವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಡಾ. ಎಸ್.ಬಿ. ಗಾಡಿ, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ, ಇತರರು ಇದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಡಾ. ಬಾಪು ಮೊರಂಕರ ಸ್ವಾಗತಿಸಿದರು. ಕಾಲೇಜಿನ ಪ್ರಾಚಾರ್ಯ ನಾಗರಾಜ ಶಿರೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌನೇಶ ಬಡಿಗೇರ ವಂದಿಸಿದರು.