ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾದಕ ವಸ್ತುಗಳ ದುರ್ಬಳಕೆ ಹಾಗೂ ವ್ಯಸನವು ನಾಗರಿಕತೆಯ ಅಧಃಪತನದ ಸಂಕೇತವಲ್ಲದೆ, 21ನೇ ಶತಮಾನದ ನಾಗರಿಕ ಸಮಾಜದ ದುರಂತ ಎಂದು ಧಾರವಾಡ ಡಿಮ್ಹಾನ್ಸ್‌ನ ಮನೋಆರೋಗ್ಯ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪವು ಕುಂದಗೋಳ ತಾಲೂಕಿನ ಸಂಶಿಯ ಕೆಎಲ್‌ಇ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಅವರು ಉಪನ್ಯಾಸ ನೀಡಿದರು.
ನಾಡಿನ ನಿಜವಾದ ಆಸ್ತಿ ಯುವಕರು. ಈ ಕರಾಳ ಛಾಯೆಯಲ್ಲಿ ಸಿಲುಕಿಕೊಂಡಿರುವುದು ದಿಗಿಲು ಹುಟ್ಟಿಸುವ ಸಂಗತಿ. ಮಾದಕ ವಸ್ತುಗಳ ಸೇವನೆ ಭಾರತದಲ್ಲಿ ಮಾತ್ರವಲ್ಲ, ಪಶ್ಚಿಮ ರಾಷ್ಟ್ರಗಳಲ್ಲೂ ವ್ಯಾಪಕವಾಗಿ ಹರಡಿದೆ. ಅಮಲಿನ ಪದಾರ್ಥಗಳ ಸೇವನೆಯಿಂದ ಯುವಕರು ಕೊಲೆ, ಸುಲಿಗೆ, ಅಪಘಾತ, ಲೈಂಗಿಕ ಅತ್ಯಾಚಾರದಂತಹ ಕೃತ್ಯ ಮಾಡುವ ಸಾಧ್ಯತೆ ಇದೆ ಎಂದರು.
ಮಾದಕ ವಸ್ತುಗಳ ಸೇವನೆಯಿಂದ ಹೃದಯಾಘಾತ, ನರ ದೌರ್ಬಲ್ಯ, ಜೀರ್ಣಕ್ರಿಯೆ ನಷ್ಟ, ರಕ್ತ ಹೀನತೆಯಂತಹ ಗಂಭೀರ ಕಾಯಿಲೆಗೆ ಬಲಿಯಾಗಬೇಕಾಗುತ್ತದೆ. ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗದೆ ಆರ‌್ಯೋಗ್ಯ ಪೂರ್ಣ ಜೀವನ ನಡೆಸಬೇಕು. ಜತೆಗೆ ಚರ್ಚಾಕೂಟ, ವಿಚಾರ ಸಂಕಿರಣ, ಉಪನ್ಯಾಸ, ಬೀದಿ ನಾಟಕಗಳ ಮೂಲಕ ಜನಜಾಗೃತಿ ಸಮಾಜದಲ್ಲಿ ಉಂಟು ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಶಿ ಕೆಎಲ್‌ಇ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎ.ಬಿ. ಉಪ್ಪಿನ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುತ್ತಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಯುವಕರನ್ನು ಎಚ್ಚರಿಸುವಲ್ಲಿ ಸಂಘದ ಮಕ್ಕಳ ಮಂಟಪದ ಕಾರ್ಯ ಶ್ಲಾಘನೀಯ ಎಂದರು.
ಶಂಕರ ಕುಂಬಿ, ವೀರಣ್ಣ ಒಡ್ಡೀನ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ರಮೇಶ ಅತ್ತಿಗೇರಿ ಸ್ವಾಗತಿಸಿದರು. ಡಾ. ಧನವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಸಿ. ಅಂಗಡಿ ನಿರೂಪಿಸಿದರು. ಚನ್ನಮ್ಮ ಗುರುಮಠ ವಂದಿಸಿದರು.