ಹಾಸನ: ಸಮಾಜದಲ್ಲಿ ದುಶ್ಚಟಗಳನ್ನು ತೊಲಗಿಸುವ ನಿಟ್ಟಿನಲ್ಲಿ ಇಡಿ ಜೀವನ ಶ್ರಮಿಸಿದ ಡಾ.ಮಹಾಂತ ಶಿವಯೋಗಿಗಳ ಕರೆಯಂತೆ ದುಶ್ಚಟಗಳಿಂದ ದೂರವಿದ್ದು, ಜೀವನವನ್ನು ಸ್ವಚ್ಚವಾಗಿ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಅವರು ತಿಳಿಸಿದರು.
ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಮಹಾಂತ ಶಿವಯೋಗಿಗಳು ಜನ್ಮ ದಿನವನ್ನು ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಆಚರಣೆ ಮಾಡಲು ಸರ್ಕಾರ ಘೋಷಣೆ ಮಾಡಿದೆ. ಸಮಾಜದ ಬಗ್ಗೆ ಕಳಕಳಿಯಿಂದ ಕೆಲಸ ಮಾಡುತ್ತಿದ್ದ ಅವರಿಗೆ ಬಸವ ಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಿದೆ ಎಂದು ತಿಳಿಸಿದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಆ.1, 1930 ರಲ್ಲಿ ಜನಿಸಿದ ಡಾ:ಮಹಾಂತ ಶಿವಯೋಗಿಗಳು ತಮ್ಮ 10 ನೇ ವಯಸ್ಸಿನಲ್ಲಿಯೇ ಸವದಿಯ ವಿರಕ್ತಮಠದ ಕಿರಿಯ ಸ್ವಾಮಿಜೀಗಳಾದರು. ಸಂಸ್ಕೃತ, ಹಿಂದಿ, ಯೋಗ ಹಾಗೂ ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಪರಿಣಿತಿ ಹೊಂದಿದ್ದರು ಎಂದು ತಿಳಿಸಿದರು.
ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮಹಾಂತ ಶಿವಯೋಗಿಗಳು ನಾಡಿನಾದ್ಯಂತ ಸಂಚರಿಸಿ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿ ಎಂದು ಹೇಳಿ ಉತ್ತಮ ಜೀವನ ನಡೆಸಲು ಪ್ರೇರಣೆ ನೀಡಿದ್ದಾರೆ ಎಂದು ತಿಳಿಸಿದರು.
ಸಮಾಜ ಸುಧಾರಣೆಯ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದ ಶಿವಯೋಗಿಗಳು ಅತೀವ ಬರಗಾಲದಲ್ಲಿ ಗಂಜೀ ಕೇಂದ್ರ ತೆರೆಯುತ್ತಾರೆ. ಅದೇ ರೀತಿ ಅನ್ನದಾಸೋಹ, ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ, ಪರಿಶಿಷ್ಟ ಜಾತಿ ಮತ್ತು ಪ.ಪಂಗಡಗಳ ಯುವಕರಿಗೆ ಸಂಸ್ಕಾರ ನೀಡಿ ಪಟ್ಟಾಭಿಷೇಕ ಮಾಡಿದ್ದಾರೆ ಎಂದು ತಿಳಿಸಿದರು.
ಅರಕಲಗೂಡಿನ ದೊಡ್ಡಮಠದ ಸ್ವಾಮೀಜಿಗಳಾದ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದ ಅವರು, ಸಮಾಜದ ಏಳಿಗೆಗಾಗಿ ದುಡಿದ ಮಹಾಂತ ಶಿವಯೋಗಿಗಳನ್ನು ಸ್ಮರಿಸುವುದರ ಜೊತೆಗೆ ನಾಡಿನ ಭವಿಷ್ಯದ ಬಗ್ಗೆ ಚಿಂತಿಸಿ ಅನುಷ್ಠಾನಕ್ಕೆ ತಂದಂತಹ ಸುಧಾರಣೆ ಕಾರ್ಯಗಳನ್ನು ಅನುಸರಿಸುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಮಹಾಂತ ಶಿವಯೋಗಿಗಳ ಸಂಕಲ್ಪವನ್ನು ಈಡೇರಿಸುವುದೆ ನಮ್ಮ ಸಂಕಲ್ಪವಾಗಬೇಕು ಎಂದ ಅವರು ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಜ್ಞಾನಾರ್ಜನೆ ಹೊಂದುವುದರ ಜೊತೆಗೆ ಉತ್ತಮ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಬೇಕು. ದುಶ್ಚಟಗಳಿಂದ ದೂರವಿರಬೇಕು ಎಂದು ತಿಳಿಸಿದರು.
ಹಿಮ್ಸ್ ಮನೋವೈದ್ಯೆ ಡಾ.ಸುನಿತಾ ಅವರು ವ್ಯಸನಗಳಿಂದಾಗುವ ದುಷ್ಪರಿಣಾಮಗಳ ಕುರಿತು ಮಾತನಾಡಿ, 12-13 ನೇ ವಯಸ್ಸಿನಿಂದಲೇ ಮಕ್ಕಳು ಕುತೂಹಲಕ್ಕೆ ಧೂಮಪಾನ ಮತ್ತು ಮದ್ಯಪಾನ ಪ್ರಾರಂಭಿಸಿ ಕ್ರಮೇಣ ಅದು ಚಟವಾಗಿ ಪರಿವರ್ತನೆಗೊಂಡು ಇವುಗಳ ಸೇವನೆಯಿಲ್ಲದೆ ಜೀವನ ಸಾಧ್ಯವಿಲ್ಲ ಎಂಬ ಹಂತಕ್ಕೆ ತಲಪುತ್ತಾರೆ ಎಂದರು.
ಯುವಜನತೆ ಸಕಾರಾತ್ಮಕವಾಗಿ ಯೋಚನೆ ಮಾಡುವುದನ್ನು ರೂಡಿಸಿಕೊಂಡರೆ ಸರಿದಾರಿಯಲ್ಲಿ ಸಾಗಲು ಸಹಕಾರಿಯಾಗಲಿದೆ ಎಂದರಲ್ಲದೆ, ಇತ್ತೀಚಿನ ದಿನಗಳಲ್ಲಿ ಅತೀಯಾಗಿ ಮೋಬೈಲ್ ಬಳಕೆ ಮಾಡುವುದರಿಂದ ಅದು ಒಂದು ಚಟವಾಗಿ ಪರಿಣಾಮಬೀರುತ್ತಿದೆ ಎಂದು ಉದಾಹರಿಸಿ ತಿಳಿಸಿದರು.
ಜೀವನ ಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡು ಉತ್ತಮ ಹವ್ಯಾಸಗಳನ್ನು ಬೆಳಸಿಕೊಳ್ಳುವ ಮೂಲಕ ವ್ಯಸನಗಳಿಂದ ದೂರವಿದ್ದು, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್ ಅವರು ಪ್ರತಿಜ್ಞಾವಿಧಿ ಬೋದಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮೀನಾಕ್ಷಮ್ಮ ಸ್ವಾಗತಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹಾಲಿಂಗಯ್ಯ, ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಾಂಡು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ತಾರಾನಾಥ್ ಉಪಸ್ಥಿತರಿದ್ದರು.
ಜಾಗೃತಿ ಜಾಥಾಕ್ಕೆ ಚಾಲನೆ:
ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹಾಲಿಂಗಯ್ಯ, ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಾಂಡು, ರಾಜ್ಯ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಈ. ಕೃಷ್ಣೇಗೌಡ, ಆರೋಗ್ಯ ಇಲಾಖೆ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರುಗಳು ಹಾಜರಿದ್ದರು.