ಜಿಲ್ಲೆ

ದುಶ್ಚಟಗಳಿಂದ ದೂರವಿದ್ದರೆ ಉತ್ತಮ ಸಮಾಜ ನಿರ್ಮಾಣ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ದುಶ್ಚಟಗಳಿಂದ ದೂರವಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರ್ನಾಟಕ ಮುಕ್ತ ವಿವಿ ಪರೀಕ್ಷಾಂಗ ಕುಲಸಚಿವ ಡಾ.ಎಚ್. ವಿಶ್ವನಾಥ್ ಯುವ ಸಮುದಾಯಕ್ಕೆ ಸಲಹೆ ನೀಡಿದರು.

ನೆಹರು ಯುವ ಕೇಂದ್ರ, ದಾವಣಗೆರೆ ವಿಶ್ವವಿದ್ಯಾನಿಲಯ ಸಂಶೋಧನಾ ಅಧ್ಯಯನ ಕೇಂದ್ರ, ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಜಿಆರ್‌ಹಳ್ಳಿಯ ಜ್ಞಾನಗಂಗೋತ್ರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾದಕ ವ್ಯಸನ,ದುಷ್ಪರಿಣಾಮ ಹಾಗೂ ಸೈಬರ್ ಅಪರಾಧಗಳ ಕುರಿತ ಜಾಗೃತಿ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಜೀವನಕ್ಕೆ ದುಶ್ಚಟಗಳಿಂದ ದೂರವಿರಬೇಕಾಗಿದೆ. ಸೈಬರ್ ಅಪರಾಧಗಳು ನಿತ್ಯವೂ ಹೊಸ ರೂಪ ಪಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ನೆಹರು ಯುವ ಕೇಂದ್ರದ ಜಿಲ್ಲಾ ಯುವ ಜನಾಧಿಕಾರಿ ಎನ್.ಸುಹಾಸ್ ಮಾತನಾಡಿ, ದೇಶದ ಏಳಿಗೆಯಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ ಎಂದರು. ಸಿಇಎನ್ ಪೊಲೀಸ್ ಠಾಣೆ ಪಿಐ ವೆಂಕಟೇಶ್ ಮಾತನಾಡಿ, ಡ್ರಗ್ಸ್ ಸಮಾಜಕ್ಕೆ ಅಂಟಿದ ಕಳಂಕ. ದೇಶದಲ್ಲಿ 7.5 ಕೋಟಿ ಅಧಿಕ ವ್ಯಸನಿಗ ಳಿದ್ದಾರೆ ಎಂದರು. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉಪನ್ಯಾಸಕರಾದ ಡಾ. ಆಲಿಶ್, ಡಾ. ವಿಜಯಕುಮಾರ್, ಭರತ್, ಕುಮಾರಸ್ವಾಮಿ, ಆನಂದಪ್ಪ, ಪ್ರದೀಪ್, ದರ್ಶನ್, ಕುಮಾರ್,ಪ್ರವೀಣ್ ಇತರರಿದ್ದರು.