ಚಿತ್ರದುರ್ಗ: ಮಾದಕ ವಸ್ತು ಸೇವನೆ ಸೇರಿ ದುಶ್ಚಟಗಳಿಗೆ ದಾಸರಾದರೆ, ಅನಾರೋಗ್ಯ ಉಂಟಾಗಿ ಕುಟುಂಬ ಮತ್ತು ದೇಶಕ್ಕೆ ಹೊರೆಯಾಗಲಿದೆ. ಇದರಿಂದ ಯುವಸಮೂಹ ದೂರವಿರಬೇಕು ಎಂದು ಆರೋಗ್ಯಾಧಿಕಾರಿ ಡಾ.ಆರ್.ಮಂಜುನಾಥ್ ಸಲಹೆ ನೀಡಿದರು.
ಎಸ್‌ಜೆಎಂ ಫಾರ್ಮಸಿ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಮಾದಕ ವ್ಯಸನ, ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟ ಹೆಚ್ಚಾಗಿ ಪಕ್ಕದ ದೇಶಗಳ ಯುವ ಜನಾಂಗದ ಪರಿಸ್ಥಿತಿ ಹೇಳಲಾರದಷ್ಟು ಗಂಭೀರವಾಗಿದೆ. ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಿದೆ. ಆದ್ದರಿಂದ ಎಚ್ಚರಿಕೆಯಿಂದಿರಿ ಎಂದು ಕಿವಿಮಾತು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಮಾತನಾಡಿ, ಯುವಸಮೂಹ ದೇಶದ ಸಂಪತ್ತು. ಹೀಗಾಗಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕೆ ಹೊರತು, ದುಶ್ಚಟಗಳಿಂದ ಆರೋಗ್ಯ ಹಾಳು ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಅಬಕಾರಿ ಇನ್ಸ್‌ಪೆಕ್ಟರ್ ಶೇಕ್ ಇಮ್ರಾನ್ ಮಾತನಾಡಿ, ಯಾವುದೇ ರೀತಿಯ ಮಾದಕ ವಸ್ತುಗಳ ಉತ್ಪಾದನೆ, ತಯಾರಿಕೆ, ಕೃಷಿ, ಸ್ವಾಧೀನ, ಮಾರಾಟ, ಖರೀದಿ, ಸಾಗಣೆ, ಸಂಗ್ರಹಣೆ ಹಾಗೂ ಸೇವನೆಯನ್ನು ನಿಷೇದಿಸಲಾಗಿದೆ. ಎಲ್ಲಿಯಾದರೂ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು ಕಂಡು ಬಂದಲ್ಲಿ ಗಮನಕ್ಕೆ ತನ್ನಿ. ಸಮಾಜದ ಸ್ವಾಸ್ಥೃ ಕಾಪಾಡಿ ಎಂದು ಹೇಳಿದರು.
ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಅನಿಲ್‌ಕುಮಾರ್, ಕಾರ್ಯದರ್ಶಿ ಆರ್.ಗಂಗಾಧರ್, ಪ್ರಾಂಶುಪಾಲ ಡಾ.ಟಿ.ಎಸ್.ನಾಗರಾಜ್, ಪ್ರಾಧ್ಯಾಪಕ ಡಾ.ಮಾರುತಿ ಟಿ.ಹೆಗ್ಗಟೆ, ಉಪನ್ಯಾಸಕ ವಿಕಾಸ್ ಆರ್ ಮಠದ್, ರಂಜಿತಾ, ಚೈತ್ರಾ ಇತರರಿದ್ದರು.