ಸುಂಟಿಕೊಪ್ಪ: ಯುವ ಪೀಳಿಗೆಯು ದುಶ್ಚಟಗಳ ವಿರುದ್ಧ ಸಮರ ಸಾರುವುದರಿಂದ ಸ್ವಾಸ್ಥೃ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆ ಎಎಸ್‌ಐ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಕಾರ್ಯಕ್ಷೇತ್ರದ ವತಿಯಿಂದ ಮಂಜಿಕೆರೆ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ ಮಾತನಾಡಿ, ಇಂದಿನ ದಿನಗಳಲ್ಲಿ ಯುವಜನತೆಯೇ ದುಶ್ಚಟಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಹಲವು ಸಮಾಜಘಾತುಕ ಪ್ರಕರಣಗಳು ಜರುಗುತ್ತಿವೆ. ಊರಿನ ಸ್ವಾಸ್ಥೃವೂ ಹಾಳಾಗುತ್ತಿದೆ. ಅಲ್ಲದೆ ಪಾಲಕರು ಸಮಾಜದಲ್ಲಿ ತಲೆತಗ್ಗಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯುವಕರು ದುಶ್ಚಟಗಳಿಗೆ ಪ್ರೇರಣೆ ನೀಡುವ ಮತ್ತು ಪ್ರೇರೇಪಿಸುವವರಿಂದ ದೂರ ಇರಬೇಕು. ಉತ್ತಮ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳ ದಾಸತ್ವದಿಂದ ದೂರವಿರುವುದರಿಂದ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಬದುಕು ಸಾಗಿಸಬಹುದೆಂದು ಕಿವಿಮಾತು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಭವ್ಯಾ, ಕಾನ್‌ಬೈಲ್ ಒಕ್ಕೂಟದ ಅಧ್ಯಕ್ಷೆ ಖತ್ತೀಜಾ, ಶಾಲಾ ಶಿಕ್ಷಕರಾದ ಮಾಲಾದೇವಿ, ಬಸವರಾಜು, ಮಹೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಸೇವಾ ಪ್ರತಿನಿಧಿ ಯಶೋದಾ ಮತ್ತಿತರರು ಇದ್ದರು. ದುಶ್ಚಟಗಳಿಂದ ದೂರ ಇರುವಂತೆ ಸುಂಟಿಕೊಪ್ಪ ಪೊಲೀಸ್ ಠಾಣಾ ಎಎಸ್‌ಐ ಶ್ರೀನಿವಾಸ್ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು.