ಅರಕಲಗೂಡು: ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಮನುಷ್ಯ ದುಶ್ಚಟ, ದುರಭ್ಯಾಸಗಳಿಂದ ದೂರ ಉಳಿಯುವುದು ಒಳಿತು ಎಂದು ಹಾಸನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ರಾಮನಾಥಪುರದಲ್ಲಿ ಖಾಸಗಿ ಮಂಟಪದಲ್ಲಿ ಧರ್ಮಸ್ಥಳ ಸಂಸ್ಥೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ನಡೆಯುವವರು ಜಾರದಂತೆ, ಜಾರಿದವರು ಬೀಳದಂತೆ, ಬಿದ್ದವರನ್ನು ಮೇಲೆತ್ತುವುದೇ ಜನ ಜಾಗೃತಿಯ ಕಾಯಕವಾಗಿದೆ. ಮದ್ಯ ವ್ಯಸನವು ಬಹುತೇಕ ಕುಟುಂಬಗಳ ಮನೆಗಳಲ್ಲಿ ನೆಮ್ಮದಿ ಕಸಿದಿದೆ. ಸಮಾಜದ ಸದೃಢತೆಗೆ ಉತ್ತಮ ಸಂಸ್ಕಾರದ ಬದುಕು ಕಟ್ಟಿಕೊಳ್ಳಲು ಕುಡಿತದಂತಹ ಚಟದಿಂದ ದೂರ ಇರಬೇಕಾದುದು ಅನಿವಾರ್ಯವಾಗಿದೆ. ಮದ್ಯಪಾನ ತೊರೆದು ನಿಮ್ಮ ಬದುಕನ್ನು ಗೌರವಯುತವಾಗಿ ಸಮಾಜದಲ್ಲಿ ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.
ಶಾಸಕ ಎ.ಮಂಜು ಮಾತನಾಡಿ, ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪಣತೊಡಬೇಕು. ಸ್ತ್ರೀ ಶಕ್ತಿ, ಸ್ವ ಸಹಾಯ ಸಂಘಗಳ ರಚನೆ ಸೇರಿದಂತೆ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವ ಧರ್ಮಸ್ಥಳ ಸಂಸ್ಥೆಯ ಸೇವೆ ಅವಿಸ್ಮರಣೀಯ ಎಂದರು.
ಕೆ.ಸತೀಶ್, ಆರ್.ಎಸ್.ನರಸಿಂಹಮೂರ್ತಿ, ಲೋಕೇಶ್, ಶಾಂತಮಲ್ಲಪ್ಪ, ಶ್ರೀನಿವಾಸ್, ವಿರೂಪಾಕ್ಷ, ಕಾಳಬೋಯಿ, ಸಿದ್ದರಾಜು, ಹಿರಣ್ಣಯ್ಯ, ಶಿವರಾಮೇಗೌಡ ಇತರರಿದ್ದರು.