ಜಿಲ್ಲೆ

ದುಶ್ಚಟ ದೂರವಾಗಲು ಸಕಾಲ

ಕೋವಿಡ್ 19 ಭಾರತ ಹಾಗೂ ಜಗತ್ತಿನಾದ್ಯಂತ ಭಯಾನಕ ವಾತಾವರಣ ಸೃಷ್ಟಿ ಮಾಡಿದೆ. ಇಂಥ ಸನ್ನಿವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮನೆಯಲ್ಲಿ ಇರುವಂತೆ ಸಂದೇಶ ಕೊಟ್ಟಿದ್ದಾರೆ. ನಿಮ್ಮ ಕುಟುಂಬದ ಸದಸ್ಯನಾಗಿ ಹೇಳುತ್ತಿದ್ದೇನೆ, ಇದಕ್ಕೆ ಸಹಕರಿಸಿ ಎಂದು ಕೋರಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಮನೆಗಳಲ್ಲಿ ಇರಬೇಕು. 21 ದಿನಗಳ ಲಾಕ್​ಡೌನ್ ಅವಧಿಯಲ್ಲಿ ವಾರ ಕಳೆದಿದ್ದು, ಇನ್ನೆರಡು ವಾರ ಕಳೆದರೆ ಭಾರತ ಕರೊನಾ ಮುಕ್ತವಾಗಲಿದೆ. ಸರ್ಕಾರಗಳ ಜೊತೆಗೆ ಪ್ರತಿಯೊಬ್ಬರೂ ಸಹಕರಿಸಬೇಕು.

ಮನೆಯಲ್ಲಿ ಏನು ಮಾಡಬೇಕು ಎಂಬ ಪ್ರಶ್ನೆ ಇದೆ. ಉತ್ತಮ ಚಿಂತನೆಯಿಂದ ಸನ್ನಿವೇಶವನ್ನು ನೋಡಿದಾಗ ಮನೆಯಲ್ಲಿ ಮಕ್ಕಳೊಂದಿಗೆ, ಕುಟುಂಬದ ಸದಸ್ಯರೊಂದಿಗೆ ವೇಳೆ ಕಳೆಯಬೇಕು. ಚರ್ಚೆ, ಹರಟೆ, ಪುಸ್ತಕಗಳನ್ನು ಓದುವುದು, ಚೆಸ್, ಕೇರಂ ಆಡಬೇಕು. ಇದರಿಂದ ಖಿನ್ನತೆ, ಮಾನಸಿಕ ಒತ್ತಡ ನಿವಾರಣೆ ಸಾಧ್ಯ. ಆಲ್ಕೋಹಾಲ್, ಗುಟ್ಖಾ, ಗಾಂಜಾ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿದು ಮನಸ್ಸಿಗೆ ನೋವಾಗಿದೆ. ದೈಹಿಕ, ಮಾನಸಿಕವಾಗಿ ವ್ಯಸನಿಗಳಾದವರು ಸಹಾಯಹಸ್ತ ನೀಡಬೇಕು. ಈ ಮನೋಸ್ಥಿತಿಯವರಿಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಅಡಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಯಿಂದ ಪ್ರಾಥಮಿಕ ಹಂತದಲ್ಲೇ ಚಿಕಿತ್ಸಾ ತರಬೇತಿ ಕೊಡಿಸಬೇಕು.

ಮದ್ಯವ್ಯಸನಿಗಳು ಏಕಾಏಕಿ ವ್ಯಸನ ಬಿಟ್ಟರೆ ಮೈ ಕೈ ನಡುಗುವುದು, ತಲೆ ಸುತ್ತು, ಫಿಟ್ಸ್ ಬರುವುದು, ಖಿನ್ನತೆ, ಆತಂಕ, ಸಂಶಯ ಮನೋಭಾವನೆ ಮೂಡುತ್ತದೆ. ಅಂಥವರನ್ನು ಹತ್ತಿರದ ತಜ್ಞ ವೈದ್ಯರ ಬಳಿ ಕರೆದೊಯ್ಯಬೇಕು. ಅವರಿಗೆ ಚಿಕಿತ್ಸೆ ಸಾಧ್ಯ. ದುಶ್ಚಟಗಳನ್ನು ಬಿಡಲು ಇದು ಸದವಕಾಶ. ಕ್ಷಣಿಕ ಸುಖಕ್ಕಾಗಿ ಜೀವನ ನಾಶ ಮಾಡಿಕೊಳ್ಳುವುದು ಬೇಡ. ವ್ಯಸನ ಮಾನಸಿಕ ಸಮಸ್ಯೆ. ಇದಕ್ಕೆ ಚಿಕಿತ್ಸೆಯ ಅವಶ್ಯಕತೆ ಇದೆ. ಅವರೂ ಸಮಾಜದ ಮುಖ್ಯವಾಹಿನಿಗೆ ಬಂದು ಎಲ್ಲರಂತೆ ಬಾಳಬಹುದು.

ಮದ್ಯಕ್ಕಾಗಿ ಚಡಪಡಿಸುವಿಕೆ ಕಾಣಿಸುತ್ತದೆ. ಅವರನ್ನು ಮನೆಯ ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಸ ಬೇಕು. ಆತ್ಮಹತ್ಯೆ ಚಿಂತನೆಯನ್ನು ಬಿಟ್ಟು ಸಕಾರಾತ್ಮಕ ಚಿಂತನೆಗಳಿಂದ ಉತ್ತಮ ಬದುಕು ರೂಪಿಸಿಕೊಳ್ಳಬೇಕು. ತಾತ್ಕಾಲಿಕ ಸಮಸ್ಯೆಗಳಿಗೆ ಆತ್ಮಹತ್ಯೆ ಶಾಶ್ವತ ಪರಿಹಾರವಲ್ಲ.

| ಡಾ. ಆನಂದ ಪಾಂಡುರಂಗಿ, ಮನೋವೈದ್ಯ

================