ಜಿಲ್ಲೆ

ದುರ್ವರ್ತನೆ ತೋರುವ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ರೈತ ಸಂಘ ಆಗ್ರಹ

ಹಾಸನ : ಜಿಲ್ಲೆಯ ವಿವಿಧೆಡೆ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ದುರ್ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ನಡೆಸಿ ನಂತರ ಡಿಸಿ ಕಚೇರಿ ಆಗಮಿಸಿದ ಪ್ರತಿಭಟನಾಕಾರರು ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನೆಕೆರೆ ರವಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಆಸ್ಪತ್ರೆಗೆ ಬರುವ ರೋಗಿಗಳು, ಹಿರಿಯರು, ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ. ಅಲ್ಲದೇ ಹಲ್ಲೆ ಮಾಡಿರುವ ಪ್ರಕರಣಗಳು ನಡೆದಿವೆ. ಕೂಡಲೇ ಜಿಲ್ಲಾಡಳಿತ ಅಂತಹ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹಿರಿಯ ನಾಗರಿಕರನ್ನು ತಳ್ಳುವ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಗಳು ಕಂಡು ಬರುತ್ತಿದ್ದು, ಸಾರ್ವಜನಿಕರ ಜೊತೆ ದುರ್ವರ್ತನೆ ತೋರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಜರುಗಿಸಬೇಕು ಮತ್ತು ಯಾವುದೇ ಆಸ್ಪತ್ರೆ ಗಳಲ್ಲಿ ವೈದ್ಯರ ಕೊರತೆ ಆಗದಂತೆ ಕ್ರಮ ವಹಿಸಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿದರು.

ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತ ಚಿಕಿತ್ಸೆ ಎಂಬ ಸರ್ಕಾರದ ಆದೇಶ ಇದ್ದರೂ, ಜಿಲ್ಲೆಯ ಬಹುತೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹೆಸರಿನಲ್ಲಿ ರೋಗಿಗಳಿಂದ ಹಣ ವಸೂಲಿ ಮಾಡುವ ಪ್ರಕರಣ ಕಂಡು ಬರುತ್ತಿವೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘಟನೆಗಳ ಮುಖಂಡರಾದ ಭೈರೇಗೌಡ, ಬಾಬು, ಮೊಹಮ್ಮದ್ ಸಾದಿಕ್, ಮೊಹಮ್ಮದ್ ಸಾದಿಕ್, ಜಯರಾಂ, ಶಿವರಾಮೇಗೌಡ, ಕಮಲಮ್ಮ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.