ಜಿಲ್ಲೆ

ದುರ್ಬಲರಿಗೆ ನೆರವಾಗುವುದೇ ರೋಟರಿ ಉದ್ದೇಶ

ಹನಗೋಡು: ರೋಟರಿ ಸಂಸ್ಥೆಯು ಧರ್ಮ, ಜಾತಿ, ರಾಜಕೀಯ ಹೊರತಾಗಿದ್ದು, ದುರ್ಬಲ ಸಮುದಾಯಕ್ಕೆ ನೆರವಾಗುವುದೇ ರೋಟರಿ ಧ್ಯೇಯೋದ್ದೇಶ ಎಂದು ರೋಟರಿ ಮಾಜಿ ಸಹಾಯಕ ಪ್ರಾಂತಪಾಲ ಬಿ.ವಿ.ಜವರೇಗೌಡ ತಿಳಿಸಿದರು.


ಹುಣಸೂರು ತಾಲೂಕಿನ ಹನಗೋಡು ಗ್ರಾಮದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಹನಗೋಡು ರೋಟರಿ ಕ್ಲಬ್‌ನ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.


ಪ್ರಪಂಚದ 200ಕ್ಕೂ ಹೆಚ್ಚು ದೇಶಗಳಲ್ಲಿ 1.50 ಲಕ್ಷಕ್ಕೂ ಹೆಚ್ಚು ಸದ್ಯರನ್ನು ಹೊಂದುವ ಮೂಲಕ ರೋಟರಿ ಅಂತಾರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯಾಗಿದೆ. ಇಲ್ಲಿ ಸದಸ್ಯತ್ವ ಪಡೆಯುವುದೇ ಒಂದು ಸೌಭಾಗ್ಯ. ಕೃಷಿ ಪ್ರಧಾನವಾಗಿರುವ ತಾಲೂಕಿನಲ್ಲಿ ಕೃಷಿ ಮತ್ತು ಪ್ರಗತಿಪರ ರೈತರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ರೋಟರಿ ಸೇವೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಸಲಹೆ ನೀಡಿದರು.
ಸಹಾಯಕ ಪ್ರಾಂತಪಾಲ ಸತ್ಯನಾರಾಯಣ್ ಮಾತನಾಡಿ, ಪ್ರಸಕ್ತ ಸಾಲಿನ ರೋಟರಿ ಧ್ಯೇಯವಾಗಿರುವ ಪ್ರಪಂಚದಲ್ಲಿ ಭರವಸೆ ಮೂಡಿಸಿ ಎಂಬ ಆಶಯದಂತೆ ದುರ್ಬಲ ವರ್ಗದ ಜನರಿಗೆ ನೆರವಾಗುವ ಮೂಲಕ ಮಾದರಿಯಾಗಬೇಕು ಎಂದು ಸಲಹೆ ನೀಡಿದರಲ್ಲದೆ, ನಿರ್ಗಮಿತ ಅಧ್ಯಕ್ಷ ಹನಗೋಡು ವೆಂಕಟಪ್ಪ ಅವರ ಸೇವೆಯನ್ನು ಶ್ಲಾಘಿಸಿದರು.

ನೂತನ ಅಧ್ಯಕ್ಷರಾಗಿ ಬಿಳಿಕೆರೆ ಪ್ರಸನ್ನ, ಕಾರ್ಯದರ್ಶಿ ಅಬ್ಬೂರು ಕುಮಾರ್ ಅಧಿಕಾರ ಸ್ವೀಕರಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾಸಲಾಯಿತು. ವಲಯ ಸೇನಾನಿಗಳಾದ ಡಾ.ಬಸವರಾಜು, ಹುಣಸೂರು ರೋಟರಿ ಅಧ್ಯಕ್ಷ ಚನ್ನಕೇಶವ, ಮಾಜಿ ಅಧ್ಯಕ್ಷರಾದ ಪಾಂಡುಕುಮಾರ್, ಡಾ.ವೃಷಬೇಂದ್ರಪ್ಪ, ಆನಂದ್, ರೋಟರಿಯನ್‌ರಾದ ಕಿರಂಗೂರು ಬಸವರಾಜು, ಎಚ್.ಆರ್.ರಮೇಶ್, ಛಾಯಾಮಣಿ, ಮಂಜುಳಾ ಮಹೇಶ್, ಕೆ.ಗಣಪತಿ, ಶ್ರೀಧರ್, ಅಶ್ರಫ್, ವೀರಭದ್ರಪ್ಪ ಸೇರಿದಂತೆ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಕುಶಾಲನಗರ, ಗೋಣಿಕೊಪ್ಪ, ಮಡಿಕೇರಿ ರೋಟರಿಯ ಸದಸ್ಯರು ಭಾಗವಹಿಸಿದ್ದರು.