ಶ್ರೀರಂಗಪಟ್ಟಣ: ಪಟ್ಟಣ ವ್ಯಾಪ್ತಿಯ ದುರ್ಬಲ ವರ್ಗದವರಿಗೆ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸಲು ನಮ್ಮ ಕ್ಲಿನಿಕ್ ಸಹಕಾರಿಯಾಗಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.
ಆರೋಗ್ಯ ಇಲಾಖೆಯಿಂದ ಜನರ ಆರೋಗ್ಯ ಸೇವೆಗಳಿಗಾಗಿ ಪಟ್ಟಣದ 2ನೇ ವಾರ್ಡ್‌ನ ಲೆಪ್ರಸಿ ಕಾಲನಿಯಲ್ಲಿ ಪ್ರಾರಂಭಿಸಲಾದ ನಮ್ಮ ಕ್ಲಿನಿಕ್‌ಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ತಾಯಿ ಆರೋಗ್ಯ, ಗರ್ಭಿಣಿ ಹಾಗೂ ಬಾಣಂತಿ ಸೇವೆಗಳು, ನವಜಾತ ಶಿಶು ಆರೈಕೆ ಹಾಗೂ ಚುಚ್ಚುಮದ್ದು ಸೇವೆಗಳು, ಮಕ್ಕಳು ಹಾಗೂ ಹದಿಹರೆಯದವರಿಗೆ ನೀಡುವ ಸೌಲಭ್ಯ ಸೇರಿದಂತೆ 12 ವಿವಿಧ ಸಾಮಾನ್ಯ ಪ್ರಾಥಮಿಕ ಚಿಕಿತ್ಸೆ ಮತ್ತು ತ್ವರಿತ ಸೇವೆಗಳಿಗೆ ನಮ್ಮ ಕ್ಲಿನಿಕ್ ಸಹಕಾರಿ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ಕೆ.ವೆಂಕಟೇಶ್ ಮಾತನಾಡಿ, ನಮ್ಮ ಕ್ಲಿನಿಕ್‌ನಲ್ಲಿ ಒಬ್ಬ ವೈದ್ಯ, ಶುಶ್ರೂಷಕಿ, ಪ್ರಯೋಗಶಾಲಾ ತಂತ್ರಜ್ಞೆ ಹಾಗೂ ಡಿ ಗ್ರೂಪ್ ನೌಕರ ಇರುತ್ತಾರೆ. ಇವರನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇಮಕ ಮಾಡಿಕೊಳ್ಳಲಾಗಿದ್ದು, ಬೆಳಗ್ಗೆ 9 ರಿಂದ ಸಂಜೆ 4.30 ರವರೆಗೆ ಸೇವೆ ಲಭ್ಯವಿರಲಿದೆ ಎಂದರು.
ತಾಲೂಕು ನೋಡಲ್ ಅಧಿಕಾರಿ ಕೆ.ಪಿ.ಅಶ್ವಥ್, ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀಣಾ, ಆರೋಗ್ಯ ಇಲಾಖೆಯ ಕ್ಷೇತ್ರ ಕಾರ್ಯಕ್ರಮ ವ್ಯವಸ್ಥಾಪಕ ಅಭಿನಂದ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪಿ.ಮಾರುತಿ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ, ಪುರಸಭೆ ಅಧ್ಯಕ್ಷೆ ನಿರ್ಮಲಾ, ಮುಖ್ಯಾಧಿಕಾರಿ ಸಂದೀಪ್, ಪರಿಸರ ಇಂಜಿನಿಯರ್ ಸಹನಾ, ಆರೋಗ್ಯ ನಿರೀಕ್ಷಕರಾದ ರೇಖಾ, ಚಂಪ, ಸಿಪಿಐ ಬಿ.ಎಸ್.ಪ್ರಕಾಶ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಎಸ್.ಟಿ.ರಾಜು, ಕೃಷ್ಣಪ್ಪ, ಚೈತ್ರಾ, ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ನಾಗರಾಜು, ಪ್ರಶಾಂತ್, ಪುಟ್ಟರಾಜು, ನಳಿನಾ ಸತ್ಯಪ್ಪ ಉಪಸ್ಥಿತರಿದ್ದರು.