ಜಿಲ್ಲೆ

ದುರ್ಬಲ ಮನಸ್ಸೇ ನೂರಾರು ಕಾಯಿಲೆಗೆ ಕಾರಣ:ಎಡಿಸಿ ಕೆ.ಟಿ. ಶಾಂತಲಾ

ಹಾಸನ: ಮನಸ್ಸಿದ್ದರೆ ಮಾರ್ಗ ಎಂಬ ಹಿರಿಯ ಮಾತಿನಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬ ಗುಟ್ಟಿತ್ತು. ದೈಹಿಕವಾಗಿ ಸದೃಢವಾಗಿ ಆರೋಗ್ಯಯುತವಾಗಿದ್ದರೂ ಮನಸ್ಸು ದುರ್ಬಲವಾಗಿದ್ದರೆ ನೂರಾರು ಕಾಯಿಲೆಗಳು ಬರುವ ಸಾಧ್ಯತೆಯಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಇಂಜಿನಿಯರ್ ಕಾಲೇಜಿನ ಸಭಾಂಗಣದಲ್ಲಿ ನವಸ್ಫೂರ್ತಿ ಫೌಂಡೇಶನ್ ಫಾರ್ ಸೈಕಾಲಾಜಿಕಲ್ ಎಜುಕೇಶನ್, ಸರ್ಕಾರಿ ಇಂಜಿನಿಯರ್ ಕಾಲೇಜು, ರೆಡ್ ಕ್ರಾಸ್ ಮತ್ತು ಐಎಸ್‌ಟಿಇ ವತಿಯಿಂದ ಮಂಗಳವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಎಲ್ಲರೂ ಕೂಡ ದೈಹಿಕವಾಗಿ ಆರೋಗ್ಯವಾಗಿದ್ದರೆ ಸಾಲದು, ಮಾನಸಿಕವಾಗಿ ಆರೋಗ್ಯವಾಗಿರಬೇಕು. ಹಿಂದೆ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಈಗಿನ ಕಾಲ ಬದಲಾಗಿದೆ. ನಾವು ಯೋಚನೆ ಮಾಡಿದಂತೆ ಕೆಲಸ ಮಾಡಲು ಸಂಪೂರ್ಣ ಅವಕಾಶ ಇದೆ ಎಂದು ಹೇಳಿದರು.

ಈಗಿನ ಪರಿಸ್ಥಿತಿಯಲ್ಲಿ ನಾವು ಹೇಗಿರಬೇಕು ಎಂದು ಯೋಚಿಸಬೇಕು. ಸೋತೆ ಎಂದು ಕೊರಗುವುದನ್ನು ಬಿಟ್ಟು ಅನುಭವ ಪಡೆದೆವು ಅಂದುಕೊಂಡು ಗೆಲ್ಲುವವರೆಗೂ ಮರಳಿ ಯತ್ನ ಮಾಡಬೇಕು. ಇದನ್ನೆಲ್ಲಾ ಮಾಡಲು ನಮ್ಮ ಮಾನಸಿಕ ಆರೋಗ್ಯ ಸದೃಢವಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಹೊಳೆನರಸೀಪುರ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ವಿ.ಎಸ್. ಕೃಷ್ಣ ಮೂರ್ತಿ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷ ಅ.10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸುತ್ತದೆ. ಈ ದಿನದ ಉದ್ದೇಶ ಮಾನಸಿಕ ಆರೋಗ್ಯದ ಅರಿವು ಮತ್ತು ಜಾಗೃತಿ ಮೂಡಿಸುವುದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಾನಸಿಕ ಆರೋಗ್ಯವೆಂದರೆ ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಸಂಪೂರ್ಣವಾಗಿ ಸ್ವಸ್ಥವಾಗಿರುವುದು ಎಂದರು.

ಜಗತ್ತಿನಾದ್ಯಂತ ಇಂದು ಲಕ್ಷಾಂತರ ಜನ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅನೇಕರಿಗೆ ತಾವು ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆ ಅನ್ನುವ ಅರಿವೇ ಇರುವುದಿಲ್ಲ. ಈ ಕಾರಣಕ್ಕಾಗಿ ಈ ದಿನದಂದು ಜಾಗೃತಿ ಜತೆಗೆ ಇವುಗಳ ಕುರಿತಾದ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಕೊರೋನಾ ನಮಗೆ ಸಾಕಷ್ಟು ಪಾಠ ಕಲಿಸಿದೆ. ಕೊರೋನಾ ಬಂದವರು ಎಲ್ಲರೂ ಸಾಯಲಿಲ್ಲ. ರೋಗ ಹೆದರಿ ಸತ್ತವರ ಸಂಖ್ಯೆಯೇ ಹೆಚ್ಚು. ಮಾನಸಿಕವಾಗಿ ನಾವು ದುರ್ಬಲರಾಗಿದ್ದರೆ ಸಣ್ಣ-ಸಣ್ಣ ಸಮಸ್ಯೆಗಳಿಗೂ ಹೆದರಿ ಕೂರಬೇಕಾಗುತ್ತದೆ. ಮಾನಸಿಕವಾಗಿ ಬಲಿಷ್ಠವಾಗಿದ್ದರೆ ಮಾತ್ರ ಎಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ಬರುತ್ತದೆ. ಮನಸ್ಸು ಸಾಕಷ್ಟು ಸೂಕ್ಷ್ಮವಿರುತ್ತದೆ. ಭಯ, ಒತ್ತಡ ಹೆಚ್ಚಾದಂತೆ ದೇಹ ಸ್ಪಂದಿಸುತ್ತದೆ. ಎಲ್ಲೋ ಒಂದು ಕಡೆ ನಾವು ಆರೋಗ್ಯವನ್ನು ಅರ್ಥ ಮಾಡಿಕೊಳ್ಳುವುದನ್ನು ಬಿಟ್ಟಿದ್ದೇನೆ. ನಾವು ಚೆಂದ ಕಾಣಿಸುವ ದೇಹ ಮಾತ್ರ ಆರೋಗ್ಯವಾಗಿದೆ ಎಂದು ಹೇಳಲಾಗುವುದಿಲ್ಲ. ಅದು ದೇಹದ ಪದರ ಅಷ್ಟೆ. ಅದರ ಒಳಗಡೆ ಇರುವ ಅಂಗಾಂಗಗಳು, ನಮ್ಮ ಮನಸ್ಸಿನ ವಿಚಾರ ಆರೋಗ್ಯವಾಗಿದೆಯೇ ಎಂದು ಗಮನಿಸಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮನೋ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಪಿ. ಮಂಜುನಾಥ್, ಸರ್ಕಾರಿ ಇಂಜಿನಿಯರ್ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಪಿ. ಗಿರೀಶ್, ನವಸ್ಫೂರ್ತಿ ಫೌಂಡೇಶನ್ ಅಧ್ಯಕ್ಷೆ ವಿಜಯಲಕ್ಷ್ಮೀ, ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಡಾ.ಎಲ್. ತಿಮ್ಮೇಶ್, ಡಾ. ತೀರ್ಥೆಗೌಡ, ರಘುಪ್ರಸಾದ್ ಸೇರಿದಂತೆ ಇತರರು ಹಾಜರಿದ್ದರು.