ಜಿಲ್ಲೆ

ದುರ್ಗಕ್ಕೆ ಮೂರು ಮಾರ್ಗದಿಂದ ಗಾಂಜಾ ಘಾಟು

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಪೊಲೀಸ್ ಮತ್ತು ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟಿದ್ದರೂ ಹೊರ ರಾಜ್ಯಗಳಿಂದ ಚಿತ್ರದುರ್ಗಕ್ಕೆ ಗಾಂಜಾ ಪೂರೈಕೆ ಆಗುತ್ತಿರುವುದು ತಲೆನೋವಿನ ವಿಷಯವಾಗಿದೆ. ವಿಶೇಷವಾಗಿ ಒಡಿಶಾದಿಂದ 3 ಪ್ರತ್ಯೇಕ ಮಾರ್ಗಗಳಲ್ಲಿ ಗಾಂಜಾ ಸರಬರಾಜಾಗುತ್ತಿದ್ದು, ಬೇಸ್ತು ಬೀಳಿಸಿದೆ.

ಗಾಂಜಾ ವ್ಯಸನಿಗಳು, ಪೆಡ್ಲರ್‌ಗಳ ಹೆಡೆಮುರಿ ಕಟ್ಟಲು ಜಿಲ್ಲೆಯ ಪೊಲೀಸರು ಹರ ಸಾಹಸ ಪಡುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆ, ಮಾರಾಟಕ್ಕೆ ಕಾನೂನು ಕಠಿಣ ಶಿಕ್ಷೆ ವಿಧಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಗಾಂಜಾ ಬೆಳೆಯುವುದು, ಶಿವಮೊಗ್ಗ ಮತ್ತಿತರ ಅಕ್ಕಪಕ್ಕದ ಜಿಲ್ಲೆಗಳಿಂದ ಪೂರೈಕೆಯಾಗುವುದಕ್ಕೆ ಕಡಿವಾಣ ಬಿದ್ದಿದೆ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆ. ಈ ಕರಾಳ ದಂಧೆಯ ಆಳ-ಅಗಲ ಇನ್ನಷ್ಟೇ ತಿಳಿಯಬೇಕಿದೆ.

ಪೊಲೀಸ್ ಮತ್ತು ಅಬಕಾರಿ ಇಲಾಖೆ ಪ್ರತ್ಯೇಕ ನಿಗಾದಿಂದ ಜಿಲ್ಲೆಯಲ್ಲಿ ಗಾಂಜಾ ಬೆಳೆಯುವುದು ಹಾಗೂ ರಾಜ್ಯದ ಇತರೆ ಜಿಲ್ಲೆಗಳಿಂದ ಸರಬರಾಜಿಗೆ ಕಡಿವಾಣ ಬಿದ್ದಿದೆ. ಆದರೆ ಒಡಿಶಾದಿಂದ ಚಿತ್ರದುರ್ಗಕ್ಕೆ 3 ಪ್ರತ್ಯೇಕ ಮಾರ್ಗಗಳಲ್ಲಿ ಗಾಂಜಾ ನುಸುಳಿ ಬರುವುದನ್ನು ಪತ್ತೆ ಮಾಡಲಾಗಿದೆ. ಇದರಲ್ಲಿ ರೈಲು, ರಸ್ತೆ ಮಾರ್ಗಗಳು ಸೇರಿವೆ. ಅದರ ಚೈನ್‌ಲಿಂಕ್ ಕಡಿತಕ್ಕೆ ಪ್ರಯತ್ನ ನಡೆದಿದೆ.

ರಸ್ತೆ ಮಾರ್ಗದಲ್ಲಿ ರಾಯಗಢದಿಂದ ಆಂಧ್ರಪ್ರದೇಶದ ವಿಜಯವಾಡ, ಬೆಂಗಳೂರು ಮೂಲಕ ಚಿತ್ರದುರ್ಗಕ್ಕೆ, ಮತ್ತೊಂದು ವಿಶಾಖಪಟ್ಟಣಂ, ಗುಂಟೂರು, ಗುಂತ್ಕಲ್‌ವರೆಗೆ ರೈಲು ಮಾರ್ಗ ಅಲ್ಲಿಂದ ರಸ್ತೆ ಮೂಲಕ, ಮೂರನೆಯದಾಗಿ ರಾಯಗಢದಿಂದ ಮಹಾರಾಷ್ಟ್ರದ ಮೀರಜ್, ಹುಬ್ಬಳ್ಳಿಯಿಂದ ಗಾಂಜಾ ಬರುತ್ತಿದೆ.

ಇದಕ್ಕೆ ಸಂಬಂಧಿಸಿದಂತೆ ರಾಜು, ಹರಿಓಂ, ನೀಲ್‌ಗೋರಿ, ಬಾಬಾಜಿ ಸುಬೂದಿ, ಮೆಹಬೂಬ್ ಸುಭಾನ್, ತಂಜೀಮ್ ಮತ್ತಿತರ ಅಂತಾರಾಜ್ಯ, ರಾಜ್ಯ, ಜಿಲ್ಲೆಯ ಖದೀಮರನ್ನು ಸೈಬರ್ ಪೊಲೀಸರು ಬಂಧಿಸಿ ಕಂಬಿ ಹಿಂದೆ ಅಟ್ಟಿದ್ದಾರೆ. ಇದರೊಂದಿಗೆ ಇತರ ಜಿಲ್ಲೆ, ರಾಜ್ಯಗಳಿಂದಲೂ ಪೂರೈಕೆಯಾಗುತ್ತಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

--

ದಾಖಲಾದ ಪ್ರಕರಣ

ಕಳೆದ ಮೂರು ವರ್ಷಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ದಾಖಲಿಸಿಕೊಂಡು ಲಕ್ಷಾಂತರ ರೂ. ಮೌಲ್ಯ ದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. 2022 ರಲ್ಲಿ 18, 2023-71, 2024 ರಲ್ಲಿ 59 ಪ್ರಕರಣಗಳನ್ನು ದಾಖಲಿಸಿಕೊಂಡು ಕ್ರಮವಾಗಿ 30, 120 ಹಾಗೂ 104 ಆರೋಪಿಗಳನ್ನು ಬಂಧಿಸಲಾಗಿದೆ. ಇದೇ ಅವಧಿಯಲ್ಲಿ ಗಾಂಜಾ ಸೇವನೆಗೆ ಸಂಬಂಧಿಸಿ 114 ಜನರನ್ನು ಬಂಧಿಸಿದ್ದು, ಈ ಪೈಕಿ 45 ಅಪರಾಧಿಗಳಿಗೆ ಶಿಕ್ಷೆಯಾಗಿದೆ.

---

ಕೆಮ್ಮಿನ ಔಷಧ, ನೋವು ನಿವಾರಕ ಮಾತ್ರೆ

ಮಾದಕ ವ್ಯಸನಿಗಳು ಕೆಲವು ಕೆಮ್ಮಿನ ಔಷಧ, ನೋವು ನಿವಾರಕ ಮಾತ್ರೆಗಳನ್ನು ಬಳಸುತ್ತಾರೆ. ಇವುಗಳ ಅನಧಿಕೃತ ಮಾರಾಟದ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಜಿಲ್ಲೆಯಲ್ಲಿ ಸಿಂಥೆಟಿಕ್ ಡ್ರಗ್ಸ್ ಜಾಲ ಇಲ್ಲ. ಹಾಗಂತ ಮೈ ಮರೆತು ಕುಳಿತುಕೊಂಡಿಲ್ಲ. ಮಾದಕ ವಸ್ತುಗಳ ಜಾಲದ ಮಾಹಿತಿ ಪಡೆಯುವುದು, ಇತರೆ ಅಪರಾಧ ಚಟುವಟಿಕೆಗಳ ಮಾಹಿತಿ ಸಂಗ್ರಹಿಸುವುದಕ್ಕಿಂತ ಕೊಂಚ ಕಠಿಣ. ಆದರೂ ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆದಿದೆ ಎನ್ನುತ್ತಾರೆ ಪೊಲೀಸರು.

----

ಕೋಟ್

ಗಾಂಜಾ ಮತ್ತಿತರ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟಕ್ಕೆ ಅತ್ಯಂತ ಕಠಿಣ ಶಿಕ್ಷೆ ಇದೆ. ಆದ್ದರಿಂದ ಮಕ್ಕಳ ಮೇಲೆ ಪಾಲಕರು,ಬೋಧಕರು ನಿಗಾ ವಹಿಸಬೇಕು. ಇಂಥ ವಿಷಯಗಳು ಗಮನಕ್ಕೆ ಬಂದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು.

ರಂಜಿತ್‌ಕುಮಾರ್ ಬಂಡಾರು, ಎಸ್‌ಪಿ, ಚಿತ್ರದುರ್ಗ