ಚಿತ್ರದುರ್ಗ: ವಿಶ್ವಗುರು, ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣ ಅವರ ಬದುಕು, ಸಂದೇಶ ಮತ್ತು ಚಿಂತನೆಗಳ ಕುರಿತು ಅರಿವು ಮೂಡಿಸಲು ರಾಜ್ಯಾದ್ಯಂತ ಸಂಚರಿಸುತ್ತಿರುವ ಅನುಭವ ಮಂಟಪ-ಬಸವಾದಿ ಶರಣರ ವೈಭವ ರಥಯಾತ್ರೆ ಭಾನುವಾರ ನಗರ ಪ್ರವೇಶಿಸಿತು.
ಒನಕೆ ಓಬವ್ವ ವೃತ್ತದಲ್ಲಿ ರಥಯಾತ್ರೆಯನ್ನು ವಿವಿಧ ಜಾನಪದ ಕಲಾತಂಡಗಳೊಂದಿಗೆ ಸ್ವಾಗತಿಸಿ, ಜಿಲ್ಲಾಡಳಿತದಿಂದ ಬಸವಾದಿ ಶರಣರಿಗೆ ಪುಷ್ಪನಮನ ಸಲ್ಲಿಸಿ, ಮಹಾಮಂಗಳಾರತಿ ಬೆಳಗಿ, ಗೌರವ ಸಮರ್ಪಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಯಾತ್ರೆಗೆ ಚಾಲನೆ ನೀಡಿದರು.
ಏ. 29, 30ರಂದು ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಅಂಗವಾಗಿ ರಥಯಾತ್ರೆ ಆಯೋಜಿಸಿದ್ದು, ತುಮಕೂರು ಮಾರ್ಗವಾಗಿ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ ರಥಯಾತ್ರೆಗೆ ಶನಿವಾರ ರಾತ್ರಿ ಚಿತ್ರದುರ್ಗ ನಗರದಲ್ಲಿ ವಾಸ್ತವ್ಯ ಕಲ್ಪಿಸಲಾಗಿತ್ತು. ನಂತರ ಭಾನುವಾರ ದಾವಣಗೆರೆ ಜಿಲ್ಲೆಯತ್ತ ಪಯಣ ಮುಂದುವರಿಸಿತು.
ವಿಶ್ವದ ಪ್ರಥಮ ಸಂಸತ್ತು ಅನುಭವ ಮಂಟಪ ಮಾದರಿ ಅನುಸರಿಸಿ ಬಸವಾದಿ ಶರಣರ ವೈಭವ ರಥವನ್ನು ಸಿದ್ಧಪಡಿಸಲಾಗಿದೆ. ರಥದೊಳಗೆ ಬಸವಣ್ಣ ಅವರೊಂದಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಭಗವಾನ್ ಗೌತಮ ಬುದ್ಧ, ಶಿವಶರಣೆ ಅಕ್ಕಮಹಾದೇವಿ, ಸಂತ ಶಿಶುನಾಳ ಶರೀಪ, ಗುರುನಾನಕ್, ಭಗವಾನ್ ಮಹಾವೀರ, ನಾರಾಯಣ ಗುರು, ಯೇಸು ಕ್ರಿಸ್ತರ ಮೂರ್ತಿಗಳು ಗಮನ ಸೆಳೆದವು.
ಎಸಿ ಮೆಹಬೂಬ್ ಜಿಲಾನಿ ಖುರೇಷಿ, ತಹಸೀಲ್ದಾರ್ ಗೋವಿಂದರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಮುಖಂಡರಾದ ಕೆ.ಸಿ.ನಾಗರಾಜು, ಮಹಡಿ ಶಿವಮೂರ್ತಿ, ರೀನಾ ವೀರಭದ್ರಪ್ಪ, ಕೆಇಬಿ ಷಣ್ಮುಖಪ್ಪ, ಚಿನ್ಮಯಾನಂದ, ಶಶಿಧರ್ ಇತರರಿದ್ದರು.