ಚಾಮರಾಜನಗರ: ಹೆಬ್ಬುಲಿಗೆ ವಿಷವಿಕ್ಕಿ ಸಾಯಿಸಿ ಅಮಾನವೀಯವಾಗಿ ಮೂರು ತುಂಡುಗಳಾಗಿ ಕತ್ತರಿಸಿದ ಕೃತ್ಯದಲ್ಲಿ ದುರುಳರ ವಾಸನೆಯ ಜಾಡು ಹಿಡಿದು ಅವರ ಮನೆ ಬಾಗಿಲಿಗೆ ಹೋಗಿನಿಂತವನೇ ‘ದ್ರೋಣ’..!
ದೇಶದ ಪ್ರಸಿದ್ಧ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಲ್ಲಿ ಒಂದಾಗಿರುವ ಬಂಡೀಪುರದ ಪತ್ತೆದಾರಿ ಶ್ವಾನವೇ ಈ ದ್ರೋಣ. ಅರಣ್ಯದಲ್ಲಿ ಮರಗಳ್ಳರು ಮತ್ತು ಕಳ್ಳಬೇಟೆಗಾರರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಶ್ವಾನ ರಾಣಾ ನಿಧನದ ನಂತರ ಈ ಸ್ಥಾನವನ್ನು ತುಂಬುತ್ತಿರುವ ಚಾಣಾಕ್ಷ ದ್ರೋಣ. ಮಹದೇಶ್ವರ ವನ್ಯಜೀವಿಧಾಮದ ಪಚ್ಚೆದೊಡ್ಡಿಯಲ್ಲಿ ಹುಲಿ ಹತ್ಯೆ ಮಾಡಿದ ಪ್ರಕರಣದಲ್ಲಿ ಸ್ಥಳಕ್ಕೆ ಹೋಗಿದ್ದ ದ್ರೋಣನ ದುರುಳರ ವಾಸನೆ ಗ್ರಹಿಸಿ ಅವರ ಜಾಡು ಹಿಡಿಯುವಲ್ಲಿ ಯಶಸ್ವಿಯಾಗಿದೆ.
ವಾಸನೆಯ ಬಾಣ, ಮನೆ ಬಾಗಿಲಿಗೆ ದ್ರೋಣ:
ದ್ರೋಣ ತೋರಿದ ಬುದ್ಧಿವಂತಿಕೆಯನ್ನು ಹತ್ತಿರದಿಂದ ನೋಡಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ಪ್ರತಿನಿಧಿ ಮತ್ತು ಪೀಪಲ್ ಾರ್ ಾರೆಸ್ಟ್ ಅಂಡ್ ವೈಲ್ಡ್ ಲ್ೈ ಕನ್ಸರ್ವೆಷನ್ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಜಾನ್‌ಪೀಟರ್ ‘ವಿಜಯವಾಣಿ’ಗೆ ವಿವರಿಸಿದ್ದಾರೆ.
‘ಹುಲಿ ಹತ್ಯೆ ಪ್ರಕರಣ ಬೇಧಿಸಲು ನಾಗರಹೊಳೆ ಶ್ಟೆಲ್ಲಾ ಶ್ವಾನ ಬಂದು ತುಂಡು ಮಾಡಿದ್ದ ಹುಲಿಯ ಮೃತದೇಹಗಳ ಜಾಡು ಹಿಡಿಯಿತು. ಬಂಡೀಪುರದಿಂದ ಬಂದಿದ್ದ ದ್ರೋಣ ತನ್ನ ಕರ್ತವ್ಯವನ್ನು ಚೆನ್ನಾಗಿ ಮಾಡಿತು. ಕೃತ್ಯ ನಡೆದ ಸ್ಥಳದ ಸಮೀಪದಲ್ಲೇ ಜ್ಯೂಸ್ ಬಾಟಲಿ, ಚಪ್ಪಲಿ ಬಿದ್ದಿತ್ತು. ಇವುಗಳಿಂದ ವಾಸನೆ ಗ್ರಹಿಸಿದ ದ್ರೋಣ ಮುಂದಕ್ಕೆ ಹೆಜ್ಜೆ ಇಡಲು ಆರಂಭಿಸಿತು. ಸುಮಾರು ದೂರದ ಹೋಗಿ ಆರೋಪಿ ಪಚ್ಚಮಲ್ಲು ಮತ್ತು ಅಕ್ಕ-ಪಕ್ಕದಲ್ಲೇ ಇದ್ದ ಬೇರೆ ಆರೋಪಿಗಳ ಮನೆಗಳ ಬಳಿಗೆ ಹೋಗಿ ದ್ರೋಣ ನಿಂತಿತು’ ಎಂದು ತಿಳಿಸಿದ್ದಾರೆ.
ಸಾಮಾನ್ಯನಲ್ಲ ಈ ದ್ರೋಣ:
‘ಮಹಾಭಾರತ’ದ ಮಹಾಗುರು ದ್ರೋಣರ ಹೆಸರಿನ ಬಂಡೀಪುರದ ಪತ್ತೆದಾರಿ ಶ್ವಾನ ದ್ರೋಣ ಸಾಮಾನ್ಯನಲ್ಲ. 2022ರ ಮೇ 2ರಂದು ಜನಿಸಿದ ಜರ್ಮನ್ ಶೆರ್ಡ್ ತಳಿಯ ಶ್ವಾನ ಹರಿಯಾಣದ ಪಂಚಕುಲ ಜಿಲ್ಲೆಯ ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆಯ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದುಬಂದಿದೆ. ಅಲ್ಲದೇ, ಬಂಡೀಪುರದಲ್ಲಿರುವ ಪತ್ತೆದಾರಿ ಶ್ವಾನ ತರಬೇತಿ ಕೇಂದ್ರದಲ್ಲೂ ಪಳಗುತ್ತಿರುವ ಚಾಣಾಕ್ಷ. ಕೆಲವು ಪ್ರಕರಣಗಳ ಪತ್ತೆಯಲ್ಲಿ ಪಾಲ್ಗೊಂಡಿರುವ ಉತ್ಸಾಹಿ ದ್ರೋಣ ರಣಬೇಟೆಗಾರ ರಾಣಾನ ಸ್ಥಳ ತುಂಬುವ ವಿಶ್ವಾಸವನ್ನು ದುಪಟ್ಟುಗೊಳಿಸಿದೆ.
ರಣಬೇಟೆಗಾರ ರಾಣಾನ ಹಾದಿಯಲ್ಲಿ..: ಅರಣ್ಯ ಅಪರಾಧಗಳ ಪತ್ತೆಯಲ್ಲಿ ರಾಣಾ ರಣಬೇಟೆಗಾರ. ರಾಣಾನ ಸಾಹಸ ಕೇವಲ ಬಂಡೀಪುರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅಕ್ಕ-ಪಕ್ಕದ ಜಿಲ್ಲೆಗಳ ಕಾಡಿನಲ್ಲಿ ಅಪರಾಧ ಕೃತ್ಯಗಳು ನಡೆದರೆ ಅಲ್ಲಿಗೆ ಹೋಗಿ ಆರೋಪಿಗಳ ಪತ್ತೆಗೆ ನೆರವಾಗುತ್ತಿತ್ತು. 2013ರ ಡಿ.28ರಂದು ಜರ್ಮನ್ ಶರ್ಡ್ ಶ್ವಾನ ರಾಣಾ ಜನಿಸಿತು. ಇದಕ್ಕೆ ಅರಣ್ಯ ಇಲಾಖೆಯಿಂದ 2014ರಿಂದ 15ರ ಜೂನ್‌ವರೆಗೆ ಭೂಪಾಲ್‌ನ ವಿಶೇಷ ಸಶಸ್ತ್ರ ಪಡೆಗಳ 28ನೇ ಬೆಟಾಲಿಯನ್ ತರಬೇತಿ ನೀಡಲಾಗಿತ್ತು. ಕರ್ನಾಟಕ ಅರಣ್ಯ ಇಲಾಖೆಯ ಶ್ವಾನದಳದ ಮೊದಲ ಶ್ವಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ರಾಣಾ ಸುಮಾರು 25ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಿದೆ. ರಾಣಾ ಬದುಕಿದ್ದಾಗ ಕಾಡೆಮ್ಮೆ ಕಳ್ಳಬೇಟೆ, ಹುಲಿಗಳ ಸೆರೆ ಕಾರ್ಯಾಚರಣೆ, ಹುಲಿ, ಚಿರತೆ, ಜಿಂಕೆ ಹತ್ಯೆ ಮಾಡಿದ್ದ ಬೇಟೆಗಾರರು, ಉರುಳು ಹಾಕಿದ್ದ ದುರುಳರು, ತೇಗ, ಶ್ರೀಗಂಧ ಅಷ್ಟೇ ಯಾಕೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರ ಸಂತೆ ವಲಯದ ವ್ಯಾಪ್ತಿಯಲ್ಲಿ ಕಬಿನಿ ಹಿನ್ನೀರು ಪ್ರದೇಶದಲ್ಲಿ ಬೋಟ್‌ನ ಇಂಜಿನನ್ನು ಅಪಹರಿಸಿದ್ದ ಆರೋಪಿ ಸೆರೆ ಹಿಡಿಯಲು ಕಾರಣವಾಗಿತ್ತು. ಹೀಗೆ ಮರಗಳ್ಳರ ಜಾಡು ಹಿಡಿದು ಹೊರಡಬಲ್ಲ, ವನ್ಯಪ್ರಾಣಿಗಳ ಬೇಟೆಗಾರರ ಮೂಲ ಹುಡುಕಬಲ್ಲ, ಕಾಡಿನಿಂದ ನಾಡಿಗೆ ಬಂದು ಉಪಟಳ ನೀಡುವ ಹುಲಿ ಪತ್ತೆ ಮಾಡಬಲ್ಲ ಮಹಾ ನಿಪುಣನಾಗಿದ್ದ ರಾಣಾ 2022ರ ಆಗಸ್ಟ್ 2ರಂದು ವಯೋಸಹಜ ಕಾರಣಗಳಿಂದ ನಿಧನ ಹೊಂದಿತು. ಇದರ ಸ್ಥಾನ ತುಂಬಲು ಎರಡು ಮುಧೋ ತಳಿಯ ಶ್ವಾನಗಳಿಗೆ ತರಬೇತಿ ನೀಡಲಾಗಿತ್ತು. ಎರಡೂ ಶ್ವಾನಗಳು ಪತ್ತೇದಾರಿಕೆಯಲ್ಲಿ ಪಳಗಲಿಲ್ಲ. ಹೀಗಾಗಿ ಈ ಸ್ಥಾನ ತುಂಬಲು ಬಂದಿರುವ ದ್ರೋಣ ಚಾಣಾಕ್ಷತೆ ಮೆರೆಯುತ್ತಿರುವುದು ಭರವಸೆ ಮೂಡಿಸಿದೆ.
ಹುಲಿ ಹತ್ಯೆ ಪ್ರಕರಣದಲ್ಲಿ ದ್ರೋಣ ಚಾಣಾಕ್ಷತೆಯಿಂದ ಕರ್ತವ್ಯ ನಿರ್ವಹಿಸಿದೆ. ಹುಲಿ ಕೊಂದಿದ್ದ ಸ್ಥಳದಲ್ಲಿ ಬಿಟ್ಟುಹೋಗಿದ್ದ ಚಪ್ಪಲಿಯ ವಾಸನೆ ಹಿಡಿದ ದ್ರೋಣ ಆರೋಪಿಯ ಮನೆಯ ಬಳಿಗೆ ಹೋಗಿ ನಿಂತಿತ್ತು. ನವೀನ್‌ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ ಉಪ ವಿಭಾಗ