ಮೈಸೂರು:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ವಿಭಾಗ, ಜಿಲ್ಲಾ ಜನಜಾಗೃತಿ ವೇದಿಕೆಯಿಂದ ನಗರದ ಪ್ರಾದೇಶಿಕ ಕಚೇರಿಯಲ್ಲಿ ಇತ್ತೀಚೆಗೆ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಸಭೆ ಆಯೋಜಿಸಲಾಗಿತ್ತು.
ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮಾತನಾಡಿ, ಜನಜಾಗೃತಿ ವೇದಿಕೆಯ ಸದಸ್ಯರ ಸೇವೆ ಶ್ಲಾಘನೀಯ. ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಹತ್ವದ್ದಾಗಿದೆ. ವರ್ಷದಲ್ಲಿ ವಿಶೇಷ ಕ್ರಿಯಾ ಯೋಜನೆಗಳನ್ನು ಹಾಕಿಕೊಂಡಿದ್ದು, ವಿಶ್ವ ತಂಬಾಕು ವಿರೋಧಿ ದಿನವನ್ನು ಪ್ರತಿ ತಾಲೂಕಿನಲ್ಲಿ, ಮಾದಕ ವಸ್ತುಗಳ ವಿರೋಧಿ ದಿನವನ್ನು ಎಲ್ಲೆಡೆ ಆಚರಿಸಲಾಗಿದೆ. ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಅಡಿಯಲ್ಲಿ ತಾಲೂಕಿಗೆ ಅನುದಾನದ ಕಾರ್ಯಕ್ರಮ ಮಾಡಲಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ದುಶ್ಚಟ, ದುರಭ್ಯಾಸಕ್ಕೆ ಜಾರುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ತಾಲೂಕಿನಲ್ಲಿ ಆಯ್ದ ಶಾಲೆ ಮತ್ತು ಕಾಲೇಜು ಗುರುತಿಸಿ ಕಾರ್ಯಕ್ರಮ ನಡೆಸುವುದು. ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮೊಬೈಲ್ನ ದುರ್ಬಳಕೆ, ಬೆಟ್ಟಿಂಗ್, ಪಬ್‌ಜಿ ಆಟದಿಂದ ಆಗುವ ಅನಾಹುತಗಳ ಬಗ್ಗೆ ಚರ್ಚಿಸಲಾಗುವುದು ಎಂದರು.
ಮಹಿಳೆ ಮತ್ತು ಮಕ್ಕಳ ಮೇಲೆ ಆಗುವ ದೌರ್ಜನ್ಯ ಲೈಂಗಿಕ ಕಿರುಕುಳ, ವೃದ್ಧರ ಮೇಲಾಗುವ ಅತ್ಯಾಚಾರ , ಸೈಬರ್ ಅಪರಾಧದ ಬಗ್ಗೆ, ಉತ್ತಮ ಸಂಸ್ಕ್ರತಿ, ಸಂಸ್ಕಾರದ ಬಗ್ಗೆ ಮಾಹಿತಿ ನೀಡಿ ಚರ್ಚಿಸಲಾಗುವುದು. ಮದ್ಯವರ್ಜನ ಶಿಬಿರ ಆಯೋಜಿಸಿ ಕುಡಿತ ಬಿಡಿಸಲು ಹೆಚ್ಚಿನ ಪ್ರಚಾರ ಮಾಡಬೇಕು. ಇದರಿಂದ ಸಂಸಾರಗಳು ನೆಮ್ಮದಿಯಿಂದ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದರು.
ಜಿಲ್ಲಾ ವೇದಿಕೆಯ ಅಧ್ಯಕ್ಷ ಜಿ.ಹಂದನಹಳ್ಳಿ ಸೋಮಶೇಖರ್, ಜಿಲ್ಲಾ ನಿರ್ದೇಶಕರಾದ ಎಂ.ಲಕ್ಷ್ಮಣ್, ಎಚ್.ಎಲ್.ಮುರಳೀಧರ, ವೇದಿಕೆ ಸದಸ್ಯರು, ಕ್ಷೇತ್ರ ಯೋಜನಾಧಿಕಾರಿ ಜನಜಾಗೃತಿ ಯೋಜನಾಧಿಕಾರಿಗಳು ಇದ್ದರು.