Oplus_131072 
ಜಿಲ್ಲೆ

ದುಬಾರೆ ಗಂಡಾನೆಗಳಿಗೆ ವಿರಹ ವೇದನೆ

ಬಾಲಮುರಳಿಕೃಷ್ಣ

ಸಿದ್ದಾಪುರ: ದುಬಾರೆ ಸಾಕಾನೆ ಶಿಬಿರದಲ್ಲಿ ಹೆಣ್ಣಾನೆಗಳ ಕೊರತೆಯೇ ಆನೆಗಳ ಕಾದಾಟಕ್ಕೆ ಪ್ರಮುಖ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಲ ದಿನಗಳ ಹಿಂದೆ ಧನಂಜಯ ಹಾಗೂ ಕಂಜನ್ ನಡುವೆ ನಡೆದ ಕಾದಾಟದ ಬಳಿಕ ಈ ಮಾತುಗಳು ಕೇಳಿ ಬರುತ್ತಿದ್ದು, ಗಂಡಾನೆಗಳು ಮದವೇರಿದಾಗ ಈ ರೀತಿ ಕಾದಾಟಗಳಿಗೆ ಕಾರಣವಾಗುತ್ತಿದೆ ಎನ್ನಲಾಗುತ್ತಿದೆ.

ಇದೀಗ ದುಬಾರಿ ಶಿಬಿರದಲ್ಲಿ 26 ಆನೆಗಳಿದ್ದು, ಎಂಟಕ್ಕೂ ಅಧಿಕ ಆನೆಗಳು ದಸರದಲ್ಲಿ ಪಾಲ್ಗೊಳ್ಳುತ್ತಿವೆ. ಶಿಬಿರದಲ್ಲಿ ಎರಡು ಹೆಣ್ಣಾನೆಗಳಿವೆ. ಹೆಣ್ಣಾನೆಗಳಿಗೆ 50-60 ವಯಸ್ಸಾಗಿದೆ. ಶಿಬಿರದ ಆನೆಗಳಲ್ಲಿ ಬಹುತೇಕ ಆನೆಗಳಿಗೆ ಮದ ಏರಿದ ಸಂದರ್ಭ ಹೆಣ್ಣು ಆನೆಗಳು ಸಿಗದ ಕಾರಣ ಇತರ ಆನೆಗಳ ಮೇಲೆ ಇದ್ದಕ್ಕಿದ್ದಂತೆ ದಾಳಿ ಮಾಡುತ್ತವೆ. 40 ವರ್ಷ ದಾಟಿದ ಆನೆಗಳು ತನ್ನ ಧೈರ್ಯವನ್ನು ಪ್ರದರ್ಶಿಸಲು ಸಾಕಾನೆಗಳ ಮೇಲೆ ದಾಳಿ ಮಾಡುತ್ತವೆ. ಶಿಬಿರದಲ್ಲಿ ಕೆಲವೊಮ್ಮೆ ಇತರ ಆನೆಗಳ ನಡುವೆ ಗಂಟೆಗಳ ಕಾಲ ಕಾದಾಟ ನಡೆಯುತ್ತದೆ. ಮಾವುತರು, ಕಾವಾಡಿಗರು ನಿಯಂತ್ರಣಕ್ಕೆ ತೆರಳಿದ ಸಂದರ್ಭ ಅವರ ಮೇಲು ದಾಳಿ ಮಾಡುತ್ತವೆ.

ಆನೆಗಳು ಮದವೇರುವುದು ಸಾಮಾನ್ಯ. ದುಬಾರೆ ಶಿಬಿರದಲ್ಲಿ ಪ್ರತಿ ನಿತ್ಯ ಸಾವಿರಾರು ಪ್ರವಾಸಿಗರು ಗಮನಿಸುವ ವೇಳೆ ಆನೆಗಳು ಮದವೇರಿದಾಗ ಅನಾಹುತವೇನಾದರೂ ಸಂಭವಿಸಿದರೆ ಇಲಾಖೆಗೆ ಕಪ್ಪು ಚುಕ್ಕೆಯಾಗುತ್ತದೆ. ಆದ್ದರಿಂದ ಮದ ಇರುವ ಆನೆಗಳನ್ನು ಬೇರೆ ಕಡೆ ಕಟ್ಟಿ ಹಾಕಬೇಕು. ಇಲ್ಲದಿದ್ದಲ್ಲಿ ಪ್ರವಾಸಿಗರಿಗೆ ಹಲವು ತರದ ತೊಂದರೆ ಹಾಗೂ ಪ್ರಾಣ ಹಾನಿ ಸಂಭವವಿರುತ್ತದೆ.

ಕಂಜನ್ ಆನೆಗೆ ಗಾಯ: ಧನಂಜಯ ಮತ್ತು ಕಂಜನ್ ಆನೆಗಳ ನಡುವೆ ಮತ್ತೆ ಕಾದಾಟ ಮುಂದುವರಿದಿದೆ. ಪ್ರವಾಸಿಗರು, ಮಾವುತರ ಕಣ್ಣೆದುರಲ್ಲೇ 44 ವರ್ಷ ಪ್ರಾಯದ ಧನಂಜಯ ಎಂಬ ಪುಂಡಾನೆ 28 ವರ್ಷ ಪ್ರಾಯದ ಕಂಜನ್ ಮೇಲೆ ದಾಳಿ ಮಾಡಿದೆ. ಇದರಿಂದ ಕಂಜನ್ ಆನೆಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇತ್ತೀಚೆಗಷ್ಟೆ ದಸರಾದಲ್ಲಿ ಪಾಲ್ಗೊಳ್ಳಲು ತೆರಳಿದ ಸಂದರ್ಭ ಧನಂಜಯ ಹಾಗೂ ಕಂಜನ್ ನಡುವೆ ದಾಳಿ ಮಾಡಿ ಅರಮನೆ ಆವರಣದಿಂದ ಮುಖ್ಯ ರಸ್ತೆಗೆ ಓಡಿ ಹೋದ ಘಟನೆ ಘಟನೆ ಭಾರಿ ಸುದ್ದಿಯಾಗಿತ್ತು.

ಬುಧವಾರ ದುಬಾರೆ ಶಿಬಿರದಲ್ಲಿ ಸಂಜೆ ಸಾಕಾನೆಗಳಿಗೆ ಆಹಾರ ನೀಡುವ ಸಂದರ್ಭ ಕಂಜನ್ ಆನೆ ಮೇಲೆ ಧನಂಜಯ ಆನೆ ಏಕಾಏಕಿ ದಾಳಿ ಮಾಡಿದೆ. ಶಿಬಿರದ ಕಾಂಪೌಂಡ್ ಮೂಲೆಯಲ್ಲಿ ಸಿಲುಕಿಕೊಂಡ ಕಂಜನ್ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ದಾಳಿಯಿಂದ ಗಾಯಗೊಂಡಿದೆ. ಸ್ಥಳದಲ್ಲೇ ಇದ್ದ ಮಾವುತ ಹಾಗೂ ಕಾವಾಡಿಗರು ಧನಂಜಯ ಆನೆಯನ್ನು ಸಮಾಧಾನಪಡಿಸಲು ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಕಂಜನ್‌ಗೆ ಧನಂಜಯ್ ತನ್ನ ದಂತದಿಂದ ಸತತವಾಗಿ ದಾಳಿ ನಡೆಸಿದೆ. ನಂತರ ಇತರ ಮಾವುತರು, ಕಾವಾಡಿಗರು ಸೇರಿ ಆನೆಗಳನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಧನಂಜಯ ಆನೆಗೆ ಮದವೇರಿದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಶಿಬಿರದ ಮಾವುತರು, ಕಾವಾಡಿಗರು ತಿಳಿಸಿದ್ದಾರೆ.

ನಂತರ ಆನೆಗಳು ಮಾಮೂಲಿಯಂತೆ ಶಿಬಿರದಲ್ಲಿ ಇರುವುದಾಗಿ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್‌ಕುಮಾರ್ ತಿಳಿಸಿದ್ದಾರೆ. ಎರಡೂ ಆನೆಗಳನ್ನು ವೈದ್ಯರು ಪರೀಕ್ಷೆ ನಡೆಸಿದ್ದು ಎರಡೂ ಆನೆಗಳು ಆರೋಗ್ಯವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಇದೇ ಸಂದರ್ಭ ಸ್ಥಳದಲ್ಲಿ ಜಮಾಯಿಸಿದ ಪ್ರವಾಸಿಗರು ಆನೆಗಳ ಕಾದಾಟದ ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾರೆ.