oplus_2 
ಜಿಲ್ಲೆ

ದುಡಿಯುವ ಕೈಗಳಿಗೆ ಶಕ್ತಿ ತುಂಬಿದ ಮನಮೋಹನ್ ಸಿಂಗ್

ಚಿತ್ರದುರ್ಗ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ದುಡಿಯುವ ಕೈಗಳಿಗೆ ಶಕ್ತಿ ನೀಡುವ ಮೂಲಕ ದೇಶದ ಆರ್ಥಿಕ ಸುಧಾರಣೆಗೆ ಶ್ರಮಿಸಿದ ಮಹಾನ್ ನಾಯಕ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ಬಡತನ, ನಿರುದ್ಯೋಗ, ಹಸಿವಿನಿಂದ ಬಳಲುತ್ತಿದ್ದ ಜನರು ಗುಳೇ ಹೋಗುತ್ತಿದ್ದರು. ಇಂತಹ ಸಂದರ್ಭದಲ್ಲಿ ನರೇಗಾ ಯೋಜನೆ ಜಾರಿಗೊಳಿಸಿ ದುಡಿಯುವ ಕೈಗಳಿಗೆ ಕೆಲಸ ನೀಡಿದರು. ಜಿಲ್ಲೆಯಲ್ಲಿ ಯೋಜನೆಯಡಿ 7.77ಲಕ್ಷ ಕೃಷಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. 3.30 ಲಕ್ಷ ಜನ ಜಾಬ್‌ಕಾರ್ಡ್ ಹೊಂದಿದ್ದಾರೆ ಎಂದು ತಿಳಿಸಿದರು.

ದೇಶದಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಮಾಹಿತಿ ಹಕ್ಕು ಕಾಯ್ದೆ, ಹಸಿದ ಹೊಟ್ಟೆಗಳಿಗೆ ಆಹಾರ ಭದ್ರತಾ ಯೋಜನೆ, ಬಡಮಕ್ಕಳ ಶಿಕ್ಷಣಕ್ಕೆ ಆರ್‌ಟಿಇ ಮನಮೋಹನ್ ಸಿಂಗ್ ಜಾರಿಗೆ ತಂದ ಪ್ರಮುಖ ಯೋಜನೆಗಳಾಗಿವೆ. ಆದರೆ, ಆರ್‌ಟಿಇ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಿದೆ. ಇದಕ್ಕಾಗಿ ಹೋರಾಟ ನಡೆಸಬೇಕಿದೆ ಎಂದರು.

ಮನಮೋಹನ್ ಸಿಂಗ್ ಅವರ ಆರ್ಥಿಕ ಚಿಂತನೆಯನ್ನು ಇಡೀ ಜಗತ್ತು ಒಪ್ಪಿಕೊಂಡಿತ್ತು. ದೇಶದ ಯಾವುದೇ ರಾಜ್ಯಗಳಿಗೆ ಅನುದಾನ ನೀಡಲು ಅವರು ತಾರತಮ್ಯ ಮಾಡಲಿಲ್ಲ. ಬಹಳಷ್ಟು ಜನ ಅವರನ್ನು ಮೌನಿ ಎನ್ನುತ್ತಿದ್ದರು. ಅವರು ಮೌನಿ ಅಲ್ಲ ಜ್ಞಾನಿ ಎಂದು ಹೇಳಿದರು.

ರಾಜ್ಯಸಭಾ ಮಾಜಿ ಸದಸ್ಯ ಹನುಮಂತಪ್ಪ ಮಾತನಾಡಿ, ಆರ್ಥಿಕ ತಜ್ಞರಾಗಿದ್ದ ಮನಮೋಹನ್ ಸಿಂಗ್ ಅವರು ಉತ್ತಮ ಆಡಳಿತಗಾರರಾಗಿ ರಾಷ್ಟ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ರಾಜಕಾರಣಕ್ಕಿಂತ ಹಣಕಾಸು ಆಯವ್ಯಯದ ಬಗ್ಗೆ ಬಹಳ ಪರಿಣತಿ ಹೊಂದಿದ್ದರು. ಬ್ಯಾಂಕೊಂದರ ಉದ್ಘಾಟನೆಗೆ ಜಿಲ್ಲೆ ಅವರನ್ನು ತಾವು ಕರೆತಂದಿದ್ದೆವು ಎಂದು ತಿಳಿಸಿದರು.

ಮಾಜಿ ಶಾಸಕ ಉಮಾಪತಿ ಮಾತನಾಡಿ, ಮನಮೋಹನ್ ಸಿಂಗ್ ಅವರು ದೇಶಕ್ಕೆ ಆರ್ಥಿಕ ಭದ್ರತೆ ನೀಡಿದ ಮಹಾನ್ ವ್ಯಕ್ತಿ. ಅವರು ಆರ್ಥಿಕ ತಜ್ಞರಲ್ಲದೇ, ಶಿಕ್ಷಣ ತಜ್ಞರೂ ಆಗಿದ್ದರು ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ತಾಜ್‌ಪೀರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಮೈಲಾರಪ್ಪ, ಸಂಪತ್‌ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ, ಒಬಿಸಿ ಜಿಲ್ಲಾಧ್ಯಕ್ಷ ಎನ್.ಡಿ. ಕುಮಾರ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ, ಜಿಪಂ ಮಾಜಿ ಸದಸ್ಯ ನರಸಿಂಹರಾಜು, ಲಿಡ್ಕರ್ ನಿಗಮದ ಮಾಜಿ ಅಧ್ಯಕ್ಷ ಶಂಕರ್ ಇತರರು ಇದ್ದರು.