ಜಿಲ್ಲೆ

ದುಡಿಮೆಗೆ ಕಳುಹಿಸದೆ ಶಿಕ್ಷಣ ಕೊಡಿಸಿರಿ

ಚಾಮರಾಜನಗರ: ಬಾಲ ಕಾರ್ಮಿಕ ಪದ್ಧತಿ ಸಮಾಜದ ಅನಿಷ್ಟ ಪದ್ಧತಿಯಾಗಿದ್ದು, ಇದನ್ನು ಸಂಪೂರ್ಣವಾಗಿ ಹೋಗಲಾಡಿಸಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾ ವಕೀಲರ ಸಂಘದ ನಿಕಟ ಪೂರ್ವ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಹೇಳಿದರು.

ತಾಲೂಕಿನ ಹರವೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಆಸರೆ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ದೇಶದ ಸಂಪತ್ತಾಗಿದ್ದು, ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಬೆಳೆಯಬೇಕು. ಪ್ರಬುದ್ಧರಾಗದ ಮಕ್ಕಳ ದೈಹಿಕ ದುಡಿಮೆಯಿಂದ ಅವರ ಜೀವನದ ಮೇಲೂ ತೀವ್ರತರ ಪರಿಣಾಮ ಬೀರಲಿದೆ. ಈ ಹಿನ್ನಲೆಯಲ್ಲಿ ಮಕ್ಕಳನ್ನು 18ನೇ ವಯಸ್ಸಿನವರೆಗೆ ಯಾವುದೇ ದುಡಿಮೆಗೆ ಕಳುಹಿಸದೇ ಶಿಕ್ಷಣ ಕೊಡಿಸುವ ಕೆಲಸವನ್ನು ಸಮಾಜದ ಪ್ರತಿಯೊಬ್ಬರೂ ಮಾಡಬೇಕಾಗಿದೆ ಎಂದರು.

ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಎಂ.ಮಹೇಶ್ ಮಾತಾನಾಡಿ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದರು. ಆಸರೆ ಟ್ರಸ್ಟ್ ಕಾರ್ಯದರ್ಶಿ ಟಿ.ಜೆ. ಸುರೇಶ್ ಮಾತನಾಡಿದರು. ಶಾಲೆಯ ಪ್ರಭಾರ ಪ್ರಾಂಶುಪಾಲೆ ಎಸ್.ದೀಪಾ, ಹಿರಿಯ ಕಾರ್ಮಿಕ ನಿರೀಕ್ಷಕ ವಿ.ಎಸ್.ಪ್ರಸಾದ್, ವಕೀಲ ಮಲ್ಲು, ಶಾಲೆಯ ಶಿಕ್ಷಕರಾದ ಕೆ.ಎನ್. ರಾಜೇಶ್, ವಿ.ಹರೀಶ್ ಕುಮಾರ್, ಸಿ.ಎಂ.ಮಹದೇವಸ್ವಾಮಿ, ಎಂ.ಜ್ಯೋತಿ, ಟಿ.ಶಶಿಕುಮಾರ್,ಎಸ್.ಅಂಬಿಕಾ, ಮಹೇಶ್ ಇದ್ದರು.