ಸಿರಗುಪ್ಪ: ಪ್ರಾಣಲಿಂಗ, ಭಾವಲಿಂಗ, ವಿಶ್ವಲಿಂಗವೆಂಬ ತ್ರಿಲಿಂಗಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅನುಸಂಧಾನ ಮಾಡಿಕೊಳ್ಳಬೇಕು ಎಂದು ಶ್ರೀಶೈಲ ಜಗದ್ಗುರುಗಳಾದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಪಟ್ಟಣದ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ಇಷ್ಟಲಿಂಗ ಮಹಾಪೂಜೆ ಮತ್ತು ಸಿದ್ಧಾಂತ ಶಿಖಾಮಣಿ ಕಾರ್ಯಕ್ರಮದಲ್ಲಿ ಭಾನುವಾರ ಆಶೀರ್ವಚನ ನೀಡಿದರು. ಆಧ್ಯಾತ್ಮಿಕ ಪ್ರವಚನಗಳು ಜನರ ದುಃಖ ನಿವಾರಿಸುವ ದಿವ್ಯ ಔಷಧಿಯೆಂದು ಪರಿಗಣಿಸಲಾಗಿದೆ. ಸಿದ್ಧಾಂತ ಶಿಖಾಮಣಿ ಗ್ರಂಥದ ಪ್ರವಚನಗಳು ಜೀವನದಲ್ಲಿ ನೆಮ್ಮದಿ ಮತ್ತು ಶಾಂತಿಯನ್ನು ತರುತ್ತವೆ. ಈ ಗ್ರಂಥವನ್ನು ಓದುವುದರಿಂದ ಭವರೋಗದಿಂದ ಮುಕ್ತಿ ಪಡೆಯಬಹುದು ಮತ್ತು ವ್ಯಕ್ತಿತ್ವ ವಿಕಸನಗೊಳ್ಳಲು ಸಹಾಯವಾಗಲಿದೆ ಎಂದರು.
ಸಿದ್ಧಾಂತ ಶಿಖಾಮಣಿಯನ್ನು ವೀರಶೈವ ಧರ್ಮಗ್ರಂಥ ಎಂದು ಬಣ್ಣಿಸಲಾಗಿದ್ದರೂ ಅದು ವೀರಶೈವರಿಗಷ್ಟೇ ಸೀಮಿತವಾಗಿಲ್ಲ. ಜಗತ್ತಿನ ಎಲ್ಲ ಧರ್ಮೀಯರು ಅಧ್ಯಯನ ಮಾಡುವುದರಿಂದ ಸಿದ್ಧಾಂತ ಶಿಖಾಮಣಿಯನ್ನು ಜಾಗತಿಕ ಧರ್ಮಗ್ರಂಥ ಎನ್ನಲಾಗಿದೆ. ಎಲ್ಲ ಸಿದ್ಧಾಂತಗಳಿಗಿಂತ ಈ ಗ್ರಂಥ ಮೇಲಿನ ಸ್ತರದಲ್ಲಿ ಇರುವುದರಿಂದ ಎಲ್ಲರೂ ಓದಿ ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಶ್ರೀಶೈಲ ಜಗದ್ಗುರುಗಳ ತಿಳಿಸಿದರು.
ಬೆಂಗಳೂರು ಶಿವಗಂಗಾ ಕ್ಷೇತ್ರದ ಮಲಯ ಶಾಂತಮುನಿ ಶಿವಚಾರ್ಯರು ಮಾತನಾಡಿ, ಎಲ್ಲರೂ ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಯಬೇಕು. ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಪಾಲಿಸುವ ಮೂಲಕ ಮಕ್ಕಳಿಗೂ ರೂಢಿಸಬೇಕು. ಈ ಶರೀರಕ್ಕೆ ಸದ್ಗುಣಗಳ ಸಂಸ್ಕಾರ ನೀಡಿದಲ್ಲಿ ಮೋಕ್ಷ ಪ್ರಾಪ್ತಿಯಾಗಲು ಸಾಧ್ಯ ಎಂದು ಉಪದೇಶಿಸಿದರು.
ಹಾಲ್ವಿ ಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಾಂತ ಸ್ವಾಮೀಜಿ, ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಪಾಲ್ತೂರು ಕಲ್ಲು ಹೊಳೆಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಮಾನ್ವಿ ನೀಲೊಗಲ್ಲು ಬೃಹನ್ ಸಂಸ್ಥಾನ ಮಠದ ಅಭಿನವ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಲಕ್ಷ್ಮಿಪುರ ಶ್ರೀಗಿರಿ ಸಂಸ್ಥಾನ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ರೌಡಕುಂದಾ ಸಂಸ್ಥಾನ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಸಿರಗುಪ್ಪ ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ ಆಶೀರ್ವಚನ ನೀಡಿದರು.