ಜಿಲ್ಲೆ

ದುಂಡಳ್ಳಿ ವ್ಯಾಪ್ತಿಯಲ್ಲಿ ನಿಲ್ಲದ ಕಾಡಾನೆ ಉಪಟಳ


ಶನಿವಾರಸಂತೆ: ಕೊಡಗು-ಹಾಸನ ಜಿಲ್ಲಾ ಗಡಿ ಭಾಗದ ಸಕಲೇಶಪುರ ತಾಲೂಕಿನ ಯಸಳೂರು ಮೀಸಲು ಅರಣ್ಯದಿಂದ ಕೊಡಗು ಜಿಲ್ಲೆಗೆ ಸೇರಿದ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಾದ್ರೆ, ದುಂಡಳ್ಳಿ, ದೊಡ್ಡಬಿಳಹ, ಕಿರುಬಿಳಹ, ಚಿಕ್ಕಕೊಳತ್ತೂರು, ಕಾಜೂರು, ದೊಡ್ಡಕೊಳತ್ತೂರು, ಎಡೆಹಳ್ಳಿ, ಅಪ್ಪಶೆಟ್ಟಳ್ಳಿ ಮುಂತಾದ ಗ್ರಾಮಗಳಿಗೆ ನುಸುಳುವ ಕಾಡಾನೆ ಹಿಂಡು ರಾತ್ರಿ ಹಗಲೆನ್ನದೆ ರೈತರ ಗದ್ದೆ, ತೋಟಗಳಿಗೆ ನುಗ್ಗಿ ರೈತರು ಬೆಳೆದ ಫಸಲುಗಳನ್ನು ತುಳಿದು ಧ್ವಂಸಗೊಳಿಸುತ್ತಿದೆ. ಇದರಿಂದ ಈ ಭಾಗದ ರೈತರು, ಗ್ರಾಮಸ್ಥರು ಕಳೆದ 2 ವರ್ಷಗಳಿಂದ ಕಾಡಾನೆ ಉಪಟಳದಿಂದ ತತ್ತರಿಸಿ ಹೋಗಿದ್ದೇವೆ ಎಂದು ಹತಾಶೆ ವ್ಯಕ್ತಪಡಿಸುತ್ತಾರೆ.


ಈ ಭಾಗದಲ್ಲಿ ಪ್ರತಿದಿನ ಬೆಳಗ್ಗೆ 6.30 ರಿಂದ 7 ಗಂಟೆಯಲ್ಲಿ ಕಾಡಾನೆಗಳು ಸಂಚರಿಸುತ್ತಿರುವುದು ಮಾಮೂಲಿಯಂತಾಗಿದೆ. ಸಂಬಂಧಪಟ್ಟ ಅರಣ್ಯ ಇಲಾಖೆ ಸಿಬ್ಬಂದಿ ಈ ಭಾಗದಲ್ಲಿರುವ ಕಾಡಾನೆಗಳನ್ನು ಪಕ್ಕದ ಯಸಳೂರು ಅರಣ್ಯಕ್ಕೆ ಓಡಿಸುತ್ತಿದ್ದರೂ ಮತ್ತೆ ಈ ಭಾಗಕ್ಕೆ ವಾಪಸು ಬರುತ್ತವೆ ಎಂದು ಕೂಜಿಗೆರೆ ಗ್ರಾಮದ ರೈತರು ಹೇಳುತ್ತಾರೆ.
ಕಳೆದ 3 ದಿನಗಳಿಂದ ಕೂಜಿಗೆರೆ ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಗ್ರಾಮದ ಕೆ.ಟಿ.ಹರೀಶ್, ದಿವ್ಯೇಶ್, ಕೆ.ಎಚ್.ಹರೀಶ್, ಪವನ್ ಎಂಬುವರ ತೋಟಗಳಿಗೆ ನುಸುಳಿ ರೈತರು ಬೆಳೆದ ತೆಂಗು, ಅಡಕೆ, ಬಾಳೆ, ಕಾಫಿ ಮುಂತಾದ ಫಸಲುಗಳನ್ನು ತುಳಿದು ಧ್ವಂಸಗೊಳಿಸುತ್ತಿರುವುದಾಗಿ ರೈತರು ಶನಿವಾರಸಂತೆ ಅರಣ್ಯ ಇಲಾಖೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.