ಶನಿವಾರಸಂತೆ: ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಐದಾರು ತಿಂಗಳಿನಿಂದ ರಾತ್ರಿ, ಹಗಲೆನ್ನದೆ ಸಂಚರಿಸುತ್ತಿವೆ. ಇವುಗಳ ಉಪಟಳದಿಂದ ರೈತರು ತತ್ತರಿಸಿದ್ದಾರೆ.
ಗಡಿ ಭಾಗದ ಹಾಸನ ಜಿಲ್ಲೆಯ ಯಸಳೂರು ಮೀಸಲು ವ್ಯಾಪ್ತಿಯಿಂದ ಕೊಡಗಿನ ದುಂಡಳ್ಳಿ ಗ್ರಾ.ಪಂ.ವ್ಯಾಪ್ತಿಗೆ ಒಳಪಡುವ ದುಂಡಳ್ಳಿ, ಮಾದರೆ, ಬಿಳಹ, ಕಾಜೂರು, ಚಿಕ್ಕ ಕೊಳತ್ತೂರು, ಅಪ್ಪಸೆಟ್ಟಳ್ಳಿ ಮುಂತಾದ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ರೈತರ ಕಾಫಿ, ಬಾಳೆ, ತೆಂಗು, ಅಡಕೆ ತೋಟ ಮತ್ತು ಗದ್ದೆಗಳಿಗೆ ನುಸುಳಿ ಬೆಳೆ ತುಳಿದು ದ್ವಂಸ ಮಾಡುತ್ತಿವೆ.
ದುಂಡಳ್ಳಿ ಗ್ರಾ.ಪಂ.ವ್ಯಾಪ್ತಿಯ ಬಿಳಹ ಗ್ರಾಮ ವ್ಯಾಪ್ತಿಯಲ್ಲಿ 3 ಮತ್ತು ಅಪ್ಪಸೆಟ್ಟಳ್ಳಿ ಗ್ರಾಮ ವ್ಯಾಪ್ತಿಯಲ್ಲಿ 9 ಕಾಡಾನೆಗಳು ಸಂಚರಿಸುತ್ತಿವೆ ಎಂದು ಈ ಭಾಗದ ರೈತರು ಹೇಳುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಚರಣೆ ಮಾಡಿದರೂ ಸಹ ಮತ್ತೆ ಒಂದೆರೆಡು ದಿನದಲ್ಲಿ ಮತ್ತೆ ವಾಪಸ್ಸಾಗುತ್ತಿರುವುದು ಅರಣ್ಯ ಇಲಾಖೆ ಸಿಬ್ಬಂದಿಗೂ ತಲೆನೋವಾಗಿ ಪರಿಣಮಿಸಿದೆ.
ಇತ್ತೀಚೆಗೆ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಾಜೂರು ಗ್ರಾಮದೊಳಗೆ 3 ಕಾಡಾನೆಗಳು ಲಗ್ಗೆ ಇಟ್ಟು ಗ್ರಾಮದ ಪ್ರಗತಿಪರ ಕೃಷಿಕ ಚಂದ್ರಶೇಖರ್ ಎಂಬುವರ 3 ಎಕರೆ ಗದ್ದೆಯಲ್ಲಿ ಭತ್ತ ಕಟಾವು ಮಾಡಿ ಒಣಗಲು ಬಿಟ್ಟಿದ ಭತ್ತದ ತೆನೆಯನ್ನು ತುಳಿದು ಧ್ವಂಸಗೊಳಿಸಿವೆ. ಇದರಿಂದ ಅಂದಾಜು 15 ಕ್ವಿಂಟಾಲ್ ಭತ್ತ ನಾಶವಾಗಿದೆ.
ಪಟ್ಟಣದತ್ತ ಮುಖ ಮಾಡಿರುವ ಕಾಡಾನೆಗಳು: ಹಳ್ಳಿಗಳಲ್ಲಿ ಸಂಚರಿಸುತ್ತಿದ್ದ ಕಾಡಾನೆಗಳು ಈಗ ಪಟ್ಟಣಕ್ಕೆ ಲಗ್ಗೆ ಇಡುತ್ತಿದ್ದು, ಕಳೆದ ವಾರ ಮುಂಜಾನೆಯಲ್ಲಿ ಶನಿವಾರಸಂತೆ ಪಟ್ಟಣದ ಕಾವೇರಿ ಕಾಲೇಜು ರಸ್ತೆಯಲ್ಲಿ ಸಂಚರಿಸಿದ 3 ಕಾಡಾನೆಗಳು ಅಲ್ಲಿನ ರೇಣುಕಾ ಚಂದ್ರಶೇಖರ್ ಅವರ ವಾಸದ ಮನೆಯ ಹಿತ್ತಲಿನಲ್ಲಿ ಬೆಳೆದ ಬಾಳೆ ಗಿಡಗಳನ್ನು ಧ್ವಂಸಗೊಳಿಸಿವೆ, ಇದೇ ಸಮಯದಲ್ಲಿ ಈ ರಸ್ತೆಯಲ್ಲಿ ವಾಯುವಿಹಾರ, ಜಾಗಿಂಗ್ ಮಾಡುತ್ತಿದ್ದವರು ಕಾಡಾನೆಗಳನ್ನು ಕಂಡು ಭಯಭೀತರಾಗಿ ವಾಪಸ್ ಮನೆಗೆ ಓಡಿ ಹೋಗಿರುವುದು ತಡವಾಗಿ ಬೆಳಕಿಗೆ ಬಂದಿದೆ.