ಜಿಲ್ಲೆ

ದೀಪಾವಳಿ ಹಿನ್ನೆಲೆ: ಮೈಸೂರಿನಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮ

ಮೈಸೂರು: ಕರ್ನಾಟಕ ಹಿತರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಪ್ರಯುಕ್ತ ಡಿ.ದೇವರಾಜ ಅರಸು ರಸ್ತೆ, ವಿನೋಬಾ ರಸ್ತೆ ಹಾಗೂ ಶಿವರಾಂಪೇಟೆ ಸುತ್ತಮುತ್ತ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಗುಲಾಬಿ ಹೂ ನೀಡುವ ಮೂಲಕ ಕನ್ನಡ ಪದಗಳನ್ನು ಸರಿಯಾದ ರೀತಿಯಲ್ಲಿ ಬಳಸುವಂತೆ ಅಭಿಯಾನ ನಡೆಸಲಾಯಿತು.

ಇತ್ತೀಚೆಗೆ ಸ್ಥಳೀಯ ಹಬ್ಬಗಳ ಹೆಸರನ್ನು ಅಪಭ್ರಂಶ ಗೊಳಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದೀಪಾವಳಿಯನ್ನು ದಿವಾಳಿ ಎಂದು ಶುಭ ಕೋರುವುದು, ಹಾಗೆಯೇ ದಸರಾವನ್ನು ದುಸ್ಸೆರಾ ಎಂದು ತಪ್ಪಾಗಿ ಶುಭಕೋರಲಾಗುತ್ತಿದೆ. ಅನ್ಯ ಭಾಷೆ ಶೈಲಿಯಲ್ಲಿ ಪದಬಳಕೆ ಶುಭ ಕೋರುವುದು ಖಂಡನೀಯ, ಅದರ ಅರ್ಥವೇ ಬೇರೆಯಿರುತ್ತದೆ ಎಂದು ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್ ಹೇಳಿದರು.

ಹಬ್ಬದ ದಿನಗಳು ಹತ್ತಿರ ಬರುತ್ತಿದ್ದಂತೆ ಗ್ರಾಹಕರಿಗೆ ಶುಭಾಶಯ ತಿಳಿಸಲು ಹಲವಾರು ಉದ್ದಿಮೆಗಳು ಕನ್ನಡಿಗರಿಗೆ ಉತ್ತರ ಭಾರತದ ಭಾಷೆಯಲ್ಲೇ ‘ದಿವಾಳಿ ’ಹಬ್ಬದ ಶುಭಾಶಯಗಳನ್ನು ತಿಳಿಸುತ್ತವೆ. ಬ್ಯಾಂಕ್‌ಗಳು, ಅದರಲ್ಲೂ ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದ ಬ್ಯಾಂಕ್‌ಗಳು ಸಹ ದಿವಾಳಿ ಹಬ್ಬದ ಶುಭಾಶಯಗಳು ಎಂದು ಗ್ರಾಹಕರಿಗೆ ತಿಳಿಸುತ್ತಿರುವುದು ನೋಡಿದರೆ. ಕನ್ನಡದ ಬಗ್ಗೆ ಇವರಿಗೆಷ್ಟು ಅಭಿಮಾನವಿದೆ ಮಾಹಿತಿಯಿದೆ ಎಂಬುದರ ಬಗ್ಗೆ ಸಂದೇಹ ವ್ಯಕ್ತವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡದಲ್ಲಿ ದಿವಾಳಿ ಎಂದರೆ ಎಲ್ಲವನ್ನೂ ಕಳೆದುಕೊಳ್ಳುವುದು ಎಂದರ್ಥವಿದೆ .‘ದಿವಾಳಿ ಹಬ್ಬ’ ಎಂದರೆ ಕನ್ನಡಿಗರು ಏನೆಂದು ತಿಳಿದುಕೊಳ್ಳಬೇಕು? ಅದರಲ್ಲೂ ಕನ್ನಡಿಗರು ಹಣ ಇಟ್ಟಿರುವ ಬ್ಯಾಂಕುಗಳೇ ಹೀಗೆ ಹಾರೈಸಿದರೆ! ಕನ್ನಡಿಗರಿಗೆ ಪರಿಚಯವಿರುವ ಹೆಸರುಗಳನ್ನೇ ಬಳಸಲು ತೊಂದರೆ ಏನು? ಈ ಬಗ್ಗೆ ಕನ್ನಡ ಪ್ರಾಧಿಕಾರವು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ಕೆಲವು ಅಂಗಡಿ ಮುಂಗಟ್ಟುಗಳಲ್ಲಿ ದೀಪಾವಳಿಯನ್ನು ದಿವಾಳಿಯೆಂದು ಬರೆದು ಶುಭಕೋರುತ್ತಿರುವುದು ಕಂಡು ಬಂತು. ಅಂತಹ ಮಳಿಗೆಯ ಮಾಲೀಕರಿಗೆ ಸರಿಯಾದ ಪದ ಬಳಕೆ ಕುರಿತು ಮಾಹಿತಿ ನೀಡಲಾಯಿತು.

ಈ ಸಂದರ್ಭ ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಪ್ರಮುಖರಾದ ಗುರುರಾಜ್ ಶೆಟ್ಟಿ, ಪ್ರಮೋದ್, ನಿತಿನ್, ರವಿಚಂದ್ರ, ವರುಣ ಮಹಾದೇವ್, ಮಂಜುನಾಥ್, ವಿಶಾಲ್, ಮಂಜು, ಫಾಲ್ಕನ್ ಮಾದೇಗೌಡ, ಸೋಮಶೇಖರ್ ಆಚಾರ್ ಹಾಗೂ ಇತರರು ಇದ್ದರು.