ಮೈಸೂರು: ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ದೀಪಾವಳಿ ಉಡುಗೊರೆಯಾಗಿ ಸ್ವೀಟ್ ಬಾಕ್ಸ್ ಜತೆ ಹಣ ನೀಡಿರುವ ಕುರಿತು ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದರು.
ಜನತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮ ಪ್ರಮುಖ ಅಂಗವಾಗಿದ್ದು, ಅದನ್ನು ಹಾಳು ಮಾಡುವುದು ಸರಿಯಲ್ಲ. ಬಹಳ ಹೆಸರಿರುವ ರಾಜ್ಯದ ಪ್ರತಿಷ್ಠಿತ ಪತ್ರಿಕೋದ್ಯಮದ ಗೌರವ, ಪ್ರತಿಷ್ಠೆಯನ್ನು ರಾಜಕಾರಣಿಗಳೇ ಹಾಳು ಮಾಡುತ್ತಿದ್ದೇವೆಯೇ ಅನಿಸುತ್ತದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೀಪಾವಳಿ ಉಡುಗೊರೆಯಾಗಿ ಮುಖ್ಯಮಂತ್ರಿ ಕಚೇರಿಯಿಂದಲೇ ಹಣ ನೀಡಿರುವ ಮಾತುಗಳು ಕೇಳಿಬರುತ್ತಿವೆ. ಆದ್ದರಿಂದ ಈ ಕುರಿತು ಸರ್ಕಾರ ತನಿಖೆ ನಡೆಸಬೇಕು, ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸುವುದರ ಜತೆಗೆ, ತಮ್ಮ ಮಾಧ್ಯಮ ಕಾರ್ಯದರ್ಶಿಯನ್ನು ಕೂಡಲೇ ಹೊರಹಾಕಬೇಕು ಎಂದು ಒತ್ತಾಯಿಸಿದರು.
ಪತ್ರಕರ್ತರಿಗೆ ಆಮಿಷ ಒಡ್ಡಿರುವುದರಿಂದ ಚುನಾವಣೆಗೆ ಈಗಲೇ ಬಂಡವಾಳ ಹೂಡಿಕೆ ಈಗಲೇ ಶುರುವಾಯಿತೇ? ಸಂವಿಧಾನದ ನಾಲ್ಕನೇ ಅಂಗ ಸತ್ಯದ ಸುದ್ದಿ ಕೊಲೆ ಮಾಡಲಿಕ್ಕೆ ಹೋಗುತ್ತಿದ್ದೇವೆಯೇ ಎನ್ನುವ ಅನುಮಾನ ಕಾಡತೊಡಗಿದೆ ಎಂದರು.
‘ಪತ್ರಕರ್ತರೊಂದಿಗೆ 40 ವರ್ಷಗಳಿಂದ ಸಂಬಂಧವಿದೆ. ಉಡುಗೊರೆಯಾಗಿ ಸ್ವೀಟ್ಸ್, ಹೂವು ನೀಡುತ್ತ ಬಂದಿದ್ದೇನೆ. ಕಾಂಗ್ರೆಸ್ಸಿಗರು ಪತ್ರಕರ್ತರಿಗೆ ಐಫೋನ್ ಕೊಟ್ಟಿದ್ದರು’ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಸರಿಯಲ್ಲ. ಖಾಸಗಿಯಾಗಿ ಕೆಲವರು ಉಡುಗೊರೆ ಕೊಟ್ಟಿರಬಹುದು ಎಂದು ಹೇಳಿದರು.
ಪೊಲೀಸ್ ಹುದ್ದೆಗೆ 70ರಿಂದ 80 ಲಕ್ಷ ರೂ. ಕೊಟ್ಟಿದ್ದಾರೆಂಬ ಸಚಿವ ಎಂಟಿಬಿ ನಾಗರಾಜ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಎಚ್.ವಿಶ್ವನಾಥ್, ಭ್ರಷ್ಟ್ಟಾಚಾರ ಸರ್ಕಾರದಲ್ಲಿ ಮಾತ್ರವಲ್ಲ, ಇಡೀ ವ್ಯವಸ್ಥೆಯಲ್ಲಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.