ಬಾಗಲಕೋಟೆ: ನವನಗರದ ಬಸ್ ನಿಲ್ದಾಣದಲ್ಲಿ ದೀಪಾವಳಿ ಹಬ್ಬದ ನಿಮಿತ್ಯವಾಗಿ ಸ್ವ-ಸಹಾಯ ಸಂಘಗಳ ಸದಸ್ಯರು ಉತ್ಪಾದಿಸಿದ ದೀಪಗಳ ಮಾರಾಟ ಮೇಳಕ್ಕೆ ಜಿ.ಪಂ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಶಶಿಧರ ಕುರೇರ್ ಚಾಲನೆ ನೀಡಿದರು.
ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಅಭಿಯಾನ, ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ದೀಪ ಸಂಜೀವಿನಿ ವಿವಿಧ ದೀಪಗಳ ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮೀಣ ಭಾಗದ ಮಹಿಳೆಯರನ್ನು ಸ್ವಾವಲಮಬಿಗಳನ್ನಾಗಿ ಮಾಡುವ ಉದ್ದೇಶದಿಂದ ದೀಪ ಸಂಜೀವಿನಿ ಕಾರ್ಯಕ್ರಮ ಆರಂಭಿಸಲಾಗಿದೆ. ಸ್ವ-ಸಹಾಯ ಗುಂಪುಗಳ ಬಲವರ್ಧನೆಗೆ ಇದು ಒಂದು ಪ್ರಮುಖ ಹಂತವಾಗಿದೆ ಎಂದರು.
ಗ್ರಾಮೀಣ ಮಹಿಳೆಯ ಕೈಯಿಂದ ತಯಾರಾದ ಅಕ್ಕಾ ಬ್ರ್ಯಾಂಡ್ ಉತ್ಪನ್ನಗಳು ಗುಣಮಟ್ಟ ಮತ್ತು ವಿಶ್ವಾಸಕ್ಕೆ ಹೆಸರಾಗಿವೆ. ದೀಪಾವಳಿ ಹಬ್ಬದ ನಿಮಿತ್ಯ ವಿವಿಧ ಮಾದರಿಯ ಹಾಗೂ ವಿನ್ಯಾಸವುಳ್ಳ ದೀಪಗಳನ್ನು ತಯಾರಿಸಿ ಮಾರಾಟ ಮಾಡಲು ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ನಂತರ ಸ್ವ-ಸಹಾಯ ಗುಂಪುಗಳ ಸದಸ್ಯರು ತಯಾರಿಸಿರುವ ವಿವಿಧ ವಿನ್ಯಾಸಗಳ ದೀಪಗಳನ್ನು ವೀಕ್ಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ಬಾಗಲಕೋಟೆ ಘಟಕ ವ್ಯವಸ್ಥಾಪಕ ಕೃಷ್ಣಪ್ಪ ಚವ್ಹಾಣ ಸೇರಿದಂತೆ ಸ್ವ-ಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು ತಮ್ಮ ಯಶೋಗಾಥೆಗಳನ್ನು ಹಂಚಿಕೊಂಡರು. ತರಬೇತಿ, ಉಳಿತಾಯ, ಸ್ವ ಉದ್ಯೋಗ ಮತ್ತು ಸಣ್ಣ ಕೈಗಾರಿಕಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.