ಜಿಲ್ಲೆ

ದೀಪಕ ಮಾಲಗಾರ್ ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ

ಬೀದರ್: ಆಮ್ ಆದ್ಮಿ ಪಕ್ಷದ ಬೀದರ್ ಜಿಲ್ಲಾ ಅಧ್ಯಕ್ಷರಾಗಿ ಬಸವಕಲ್ಯಾಣ ಮೂಲದ ಪಕ್ಷದ ಯುವ ಮುಖಂಡ ಪ್ರೊ.ದೀಪಕ ಮಾಲಗಾರ್ ಅವರನ್ನು ನೇಮಿಸಲಾಗಿದೆ.

ನಗರದಲ್ಲಿ ಜರುಗಿದ ಕಾರ್ಯಕರ್ತರ ಸಭೆಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಕರ್ನಾಟಕ ಉಸ್ತುವಾರಿ ರೋಮಿ ಭಟ್ಟಿ ಅವರು ಮಾಲಗಾರ್ ಅವರನ್ನು ಅಧ್ಯಕ್ಷರಾಗಿ ಘೋಷಿಸಿ ಆದೇಶ ಪತ್ರ ನೀಡಲಾಯಿತು.

ಈ ವೇಳೆ ಪೃಥ್ವಿ ರೆಡ್ಡಿ ಮಾತನಾಡಿ, ಕ್ರಿಯಾಶೀಲ ವ್ಯಕ್ತಿತ್ವವುಳ್ಳ ಮಾಲಗಾರ್ ಅವರಿಗೆ ಬೀದರ್ ಜಿಲ್ಲೆಯ ಸಾರಥ್ಯ ವಹಿಸಿರುವುದರಿಂದ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಬಲವಾಗುವ ವಿಶ್ವಾಸವಿದೆ. ಪಕ್ಷ ತಳಮಟ್ಟದಿಂದ ಬಲಿಷ್ಠ ಮಾಡುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಹಾಕಿಕೊಳ್ಳಬೇಕು ಎಂದು ಸೂಚಿಸಿದರು. ಬೀದರ್ ನಗರಸಭೆ ಚುನಾವಣೆಯಲ್ಲಿ ಪಕ್ಷ ಸ್ಪರ್ಧೆ ಮಾಡಿದ್ದು, ಹೆಚ್ಚಿನ ಸ್ಥಾನ ಪಡೆಯುವ ಭರವಸೆ ಇದೆ ಎಂದರು.

ಮಾಲಗಾರ್ ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಪಕ್ಷ ನೀಡಿರುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಲು ಅವಿರತ ದುಡಿಯುವೆ. ಜಿಲ್ಲಾದ್ಯಂತ ಪಕ್ಷದ ಕಾರ್ಯಚಟುವಟಿಕೆ ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.