ಹುಬ್ಬಳ್ಳಿ: ತಾಲೂಕಿನ ಗಂಗಿವಾಳ ಗ್ರಾಮ ಪಂಚಾಯಿತಿ ಸದಸ್ಯ ದೀಪಕ ಪಟದಾರಿ ಹತೆ್ಯೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ರಾಯನಾಳ ಗ್ರಾಮದಲ್ಲಿ ಜು. 4ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ದೀಪಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಕುರಿತು ಪ್ರವೀಣ ಮುದಿಲಿಂಗಣ್ಣವರ, ಯಲ್ಲಪ್ಪ ಮೇಟಿ, ರುದ್ರಪ್ಪ ಮೇಟಿ, ಮಲ್ಲಿಕಾರ್ಜುನ ಮೇಟಿ, ಶಿವು ಮೇಟಿ, ನಾಗರಾಜ ಹೆಗ್ಗಣ್ಣವರ ಸೇರಿ ಇತರರ ವಿರುದ್ಧ ಹಳ್ಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳೆದ 5 ವರ್ಷದ ಹಿಂದೆ ದೀಪಕ, ಮೇಟಿ ಕುಟುಂಬದ ಹುಡುಗಿಯನ್ನು ಪ್ರೀತಿಸಿ ಮದುವೆ ಆಗಿದ್ದ. ಇದಕ್ಕೆ ಹುಡುಗಿ ಮನೆಯವರ ಸಮ್ಮತಿ ಇರಲಿಲ್ಲ. ಇತ್ತೀಚೆಗೆ ರಾಯನಾಳ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ಇದೇ ವಿಚಾರವಾಗಿ ಆಕ್ರೋಶಗೊಂಡು, ಆರೋಪಿಗಳು ದೀಪಕನನ್ನು ಹತ್ಯೆಗೈದಿದ್ದಾರೆ ಎಂದು ಆರೋಪಿಸಿ ದೀಪಕನ ಸಹೋದರ ಸಂಜಯ ಪಟದಾರಿ ಪ್ರಕರಣ ದಾಖಲಿಸಿದ್ದರು. ಪೊಲೀಸರು, ಐವರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ.
ತನಿಖೆ ಸಮರ್ಪಕವಾಗಿ ನಡೆದಿಲ್ಲ. ಹತ್ಯೆ ನಡೆದು 3 ತಿಂಗಳು ಸಮೀಪಿಸಿದರೂ ಇದುವರೆಗೆ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ. ಹಳೇಹುಬ್ಬಳ್ಳಿ ಠಾಣೆ ಪೊಲೀಸರ ಮೇಲೆ ನಮಗೆ ನಂಬಿಕೆ ಇಲ್ಲ. ಹಾಗಾಗಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ದೀಪಕ ಪತ್ನಿ ಪುಷ್ಪಾ, ಸಹೋದರ ಸಂಜಯ ಪಟದಾರಿ, ತಂದೆ ಶಿವಾಜಿ ಪಟದಾರಿ, ಇತರರು ಆಗ್ರಹಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ಸಿಐಡಿ ತನಿಖೆಗೆ ಒಪ್ಪಿಸಿ ಆದೇಶ ಹೊರಡಿಸಿದೆ.
ದೀಪಕ ಪಟದಾರಿ ಹತ್ಯೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ. ಮುಂದಿನ ತನಿಖೆಯನ್ನು ಸಿಐಡಿ ಅಧಿಕಾರಿಗಳ ತಂಡ ಮುಂದುವರಿಸಲಿದೆ.
-ಲಾಭೂರಾಮ, ಹು-ಧಾ ಪೊಲೀಸ್ ಆಯುಕ್ತ