ಯಾದಗಿರಿ: ಸನಾತನ ಹಿಂದು ಧರ್ಮದಲ್ಲಿ ಒಂದೊಂದು ಮಾಸಕ್ಕೂ ಒಂದೊಂದು ಆಚರಣೆಗಳಿವೆ. ಇದರ ಹಿಂದೆ ವೈಜ್ಞಾನಿಕ ಕಾರಣಗಳು ಇವೆ. ಹಿರಿಯರು ಹಾಕಿಕೊಟ್ಟ ಸಂಸ್ಕಾರವನ್ನು ಯುವ ಪೀಳಿಗೆ ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ಶ್ರೀರಾಮಕೃಷ್ಣಾಶ್ರಮದ ಸಂಚಾಲಕ ಪಿ.ವೇಣುಗೋಪಾಲ ನುಡಿದರು.
ನಗರದ ಆಶ್ರಮದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ದೀಪಕ್ಕೊಂದು ಅಜ್ಞಾತ ಹಾಗೂ ಅಗಾಧ ಶಕ್ತಿಯಿದೆ. ಬೆಳಗುವ ದೀಪ ಮನಸ್ಸಿನ ಕತ್ತಲೆಯನ್ನು ದೂರಗೊಳಿಸುತ್ತದೆ ಮತ್ತು ಎಲ್ಲ ಕಲ್ಮಶಗಳನ್ನೂ ದೂರ ಸರಿಸಿ ಶಾಂತಿ ಮೂಡಿಸುವ ಶಕ್ತಿ ದೀಪಕ್ಕಿದೆ ಎಂದರು.
ದೇವರ ಧ್ಯಾನ, ಪ್ರಾರ್ಥನೆಯಲ್ಲಿ ದೊಡ್ಡ ಶಕ್ತಿಯಿದೆ. ಪ್ರಾರ್ಥನೆಯ ಮೂಲಕ ತನ್ನ ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ಶಾಂತಿ, ಸೌಭಾಗ್ಯ ದೊರೆಯುತ್ತದೆ. ಮನೆಯಲ್ಲಿ ದೀಪ ಹಚ್ಚುವುದರಿಂದ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ಮಹತ್ವದ ಪ್ರಾಮುಖ್ಯತೆ ಇದೆ. ಯಾವುದೇ ಕಾರ್ಯಕ್ರಮ ಅಥವಾ ಪೂಜಾ ಕೈಂಕರ್ಯಗಳನ್ನು ನಡೆಸಬೇಕಾದರೆ ಆ ಕಾರ್ಯಕ್ರಮ, ಪೂಜೆ ನಡೆಯುವುದು ದೀಪ ಬೆಳಗುವ ಮೂಲಕವೇ ಎಂದು ಹೇಳಿದರು.
ಮನೆಯಲ್ಲಿ ದೀಪ ಹಚ್ಚುವುದರಿಂದ ಅಲ್ಲಿನ ವಾತಾವರಣ ಶಾಂತಿ, ನೆಮ್ಮದಿ ಹಾಗೂ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ ಇದು ವೈಜ್ಞಾನಿಕವಾಗಿಯೂ ಧಢವಾಗಿದೆ. ದೇಶದಲ್ಲಿ ರಾಮಕೃಷ್ಣಾಶ್ರಮಗಳು ಧಾರ್ಮಿಕ ಮತ್ತು ವೈಚಾರಿಕ ಪರಂಪರೆಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.