ಚಿತ್ರದುರ್ಗ: ಗಾನಯೋಗಿ ಪಂಚಾಕ್ಷರ ಗವಾಯಿ, ಪುಟ್ಟರಾಜ ಗವಾಯಿ ಅವರು ತಮ್ಮ ಜೀವನವನ್ನು ದೀನದಲಿತರ ಉನ್ನತಿಗಾಗಿ ಮುಡಿಪಿಟ್ಟ ಮಹನೀಯರು ಎಂದು ಗುರುಮಟ್‌ಕಲ್ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಬಣ್ಣಿಸಿದರು.
ಗಾನಯೋಗಿ ಸಂಗೀತ ಬಳಗದಿಂದ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲಿಂ. ಪಂಚಾಕ್ಷರ ಗವಾಯಿ ಅವರ 81ನೇ, ಲಿಂ.ಡಾ. ಪುಟ್ಟರಾಜ ಗವಾಯಿ ಅವರ 15ನೇ ಪುಣ್ಯಸ್ಮರಣೋತ್ಸವದ ಸಾನಿಧ್ಯವಹಿಸಿ ಮಾತನಾಡಿದರು.
ತಬಲದ ಜತೆಗೆ ಹಿಂದುಸ್ತಾನಿ ಸಂಗೀತದಲ್ಲಿ ಪರಿಣಿತರಾಗಿದ್ದ ಪಂಚಾಕ್ಷರ ಗವಾಯಿ ಕರ್ನಾಟಕದ ಗುರುವಾಗಿದ್ದರು. ಹಾನಗಲ್ ಕುಮಾರ ಸ್ವಾಮೀಜಿ ಸೂಚನೆಯಂತೆ, ಅಂಧ ಮತ್ತು ಅನಾಥ ಮಕ್ಕಳಿಗೆ ಸಂಗೀತ ತರಬೇತಿ ನೀಡಲು ಪ್ರಾರಂಭಿಸಿದರು. ಗದಗಿನಲ್ಲಿ ವೀರೇಶ್ವರ ಪುಣ್ಯಾಶ್ರಮ ಸ್ಥಾಪಿಸಿದ್ದು, ಅದೀಗ ಸಂಗೀತ ಪ್ರಿಯರ ಪ್ರವಾಸಿ ತಾಣ, ತೀರ್ಥಯಾತ್ರೆಯ ಕೇಂದ್ರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾವಿರಾರು ಅಂಧ, ಬಡ ವಿದ್ಯಾರ್ಥಿಗಳು ಇಲ್ಲಿ ಸಂಗೀತ ಕಲಿತು ದೇಶದಾದ್ಯಂತ ಸೇವೆ ಸಲ್ಲಿಸುತ್ತಿದ್ದಾರೆ. ಗವಾಯಿಗಳ ಸಾಮಾಜಿಕ ಕಳಕಳಿ, ಸಂಗೀತ ಲೋಕಕ್ಕೆ ಸಲ್ಲಿಸಿದ ಸೇವೆ ಅನನ್ಯ ಎಂದರು.
ನಿವೃತ್ತ ಉಪನ್ಯಾಸಕಿ ಸಿ.ಬಿ. ಶೈಲಾ ಮಾತನಾಡಿ, ಉಭಯ ಶ್ರೀಗಳು ತಮ್ಮ ಚಿಂತನ ಮಂಥನದಿಂದ ಅತ್ಯುನ್ನತ ಸ್ಥಾನ ಪಡೆದವರು. ಸಂಗೀತದ ಮೂಲಕ ಸಾಧನೆಗೈದ ಮಹಾ ಪುರುಷರು. ಭೌತಿಕವಾಗಿ ಅಂಧರಾಗಿದ್ದರೂ ಆಂತರಿಕವಾಗಿ ಒಳಗಣ್ಣನಿಂದ ಲೋಕವನ್ನು ಬಲ್ಲ, ಸಮಾಜ ಪರಿವರ್ತನೆಗೆ ಶ್ರಮಿಸುವ ಶಕ್ತಿ ಹೊಂದಿದ್ದರು. ಅವರ ತತ್ವಾದರ್ಶ ಎಲ್ಲರಿಗೂ ದಾರಿದೀಪವಾಗಿದೆ ಎಂದು ಸಲಹೆ ನೀಡಿದರು.
ದೃಷ್ಟಿ ಇಲ್ಲದಿದ್ದರೂ ದೂರದೃಷ್ಟಿ ಉಳ್ಳವರಾದ ಗವಾಯಿಗಳು ನಾಡಿಗೆ ಸೀಮಿತವಾಗಿದ್ದ ಬಸವಣ್ಣ ಅವರ ವಚನಗಳನ್ನು ದೇಶದ ವಿವಿಧೆಡೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ಗುರುಗಳ ಆಶಯದಂತೆ ನಡೆದರು. ಅವರ ಶಿಷ್ಯರೀಗ ಪ್ರಸಿದ್ಧ ಸಂಗೀತಗಾರರಾಗಿ ಹೊರಹೊಮ್ಮುತ್ತಿರುವುದು ಸಂತಸದ ವಿಚಾರ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜನಪ್ಪ, ಜಾನಪದ ಗಾಯಕಿ ಸುಶೀಲಮ್ಮ, ಪರಿಸರ ಕಾರ್ಯಕರ್ತ ಸಿದ್ಧರಾಜು ಜೋಗಿ, ಸಂಗೀತಗಾರ ರಾಮಲಿಂಗ ಜಲ್ಲಾಪುರ, ರಂಗಕರ್ಮಿ ಪ್ರಕಾಶ್ ಬಾದರದಿನ್ನಿ ಸೇರಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಳಗದಿಂದ ಗೀತಾ ಗಾಯನ ನಡೆಯಿತು.
ಬಳಗದ ಎಂ. ತೋಟಪ್ಪ ಉತ್ತಂಗಿ, ಜಿ.ಟಿ. ನಂದೀಶ್, ಶಾರದಮ್ಮ ರುದ್ರಪ್ಪ, ಉಮಾ, ಪ್ರೇಮಾ, ನೀಲಮ್ಮ, ಕೆ.ಎಂ. ವೀರೇಶ್, ನಾಗರಾಜ್ ಸಂಗಂ, ಜ್ಞಾನಮೂರ್ತಿ, ವರದಶಂಕರ್, ಜಗದೀಶ್ವರಿ ಹಿರೇಮಠ, ನೇತ್ರಾ, ಜಯಲಕ್ಷ್ಮಿ, ಹಿಂದುಸ್ತಾನಿ ಗಾಯಕ ಆನಂದ ಪಾಟೀಲ್, ಗಾನಶ್ರೀ ಇತರರಿದ್ದರು.