ಕಮಲಾಪುರ: ಕೂಲಿ ಕೆಲಸ ಮುಗಿಸಿ ಶುಕ್ರವಾರ ರಾತ್ರಿ ದಿನಸಿ(ಕೆ) ತಾಂಡಾದಲ್ಲಿ ಮನೆಗೆ ಬಂದು ಊಟ ಮಾಡಿ ಮಲಗಿದ್ದ ದಂಪತಿ ಮಧ್ಯರಾತ್ರಿ ಬರ್ಬರವಾಗಿ ಕೊಲೆಗೀಡಾಗಿದ್ದಾರೆ. ಹೆತ್ತವರ ಹತ್ಯೆಯಾಗಿದ್ದರಿಂದ ಮಕ್ಕಳು ಅನಾಥರಾಗುವಂತಾಗಿದೆ.
ಮಾರುತಿ ದೇವಲಾ ಜಾಧವ್ (40), ಶಾರದಾಬಾಯಿ ಜಾಧವ್ (35) ಕೊಲೆಗೀಡಾದ ದಂಪತಿ. ಮಾರುತಿ ಜಾಧವ್ ಮೊದಲ ಹೆಂಡತಿಗೆ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಆಕೆ ಮರಣದ ಬಳಿಕ ಶಾರದಾಬಾಯಿ ಅವರನ್ನು ಮದುವೆಯಾಗಿದ್ದು, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ.
ಲಾಕ್ಡೌನ್ಗೂ ಪೂರ್ವ ಮುಂಬೈನಲ್ಲಿ ಪತ್ನಿ ಹಾಗೂ ಏಳು ಮಕ್ಕಳೊಂದಿಗೆ ಕೂಲಿ ಮಾಡಿ ಜೀವನ ನಡೆಸುತ್ತಿದ್ದ. ಲಾಕ್ಡೌನ್ನಿಂದ ಕೆಲಸ ಕಳೆದುಕೊಂಡು ತಾಂಡಾಕ್ಕೆ ಬಂದು ನೆಲೆಸಿದ್ದ, ಅಷ್ಟೊತ್ತಿಗೆ ಮಾರುತಿ ಜಾಧವ್ ತಂದೆ ಮರಣ ಹೊಂದಿದರು. ತದನಂತರ ಕುಟುಂಬಸ್ಥರ ಹೇಳಿಕೆಯಂತೆ ತಾಂಡಾ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡು ಜೀವಿಸುತ್ತಿದ್ದ,
ತಾಂಡಾ ನಿವಾಸಿಗಳಾದ ತೋಗು ರಾಠೋಡ್ (22) ಮತ್ತು ಮಹೇಶ ರಾಠೋಡ್ (23) ಸೇರಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ಬಗ್ಗೆ ಮಾರುತಿ ಕಮಲಾಪುರ ಠಾಣೆಗೆ ದೂರು ನೀಡಿದ್ದರೂ ನಾಲ್ಕೈದು ದಿನ ನಂತರ ಕೇಸ್ ದಾಖಲಿಸಿಕೊಂಡಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ. ತೋಗು ರಾಠೋಡ್ನನ್ನು ಪೊಲೀಸರು ಬಂಧಿಸಿದ್ದು, ಕಾರಾಗೃಹದಲ್ಲಿದ್ದಾನೆ. ಮಹೇಶ ಪರಾರಿಯಾಗಿದ್ದಾನೆ.
ಬಳಿಕ ತಾಂಡಾದಲ್ಲಿ ಹಿರಿಯರು ಎರಡು ಕುಟುಂಬದವರನ್ನು ಸೇರಿಸಿದ್ದು, ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಆಗಲು ಆರೋಪಿಗಳ ಕುಟುಂಬಸ್ಥರು ಒಪ್ಪಿದ್ದರು. ಆದರೆ ನಂತರ ಆರೋಪಿಗಳು ಮಾರುತಿ ಹತ್ತಿರ ವರದಕ್ಷಿಣೆ ನೀಡಿದರೆ ಮಾತ್ರ ಮದುವೆ ಎಂದು ಪೀಡಿಸುತ್ತಿದ್ದರು ಎನ್ನಲಾಗಿದೆ.
ಕಟ್ಟೆ ಪಂಚಾಯಿತಿ ನಿರ್ಣಯಕ್ಕೂ ಬೆಲೆ ಕೊಡದಿದ್ದಾಗ ಮಾರುತಿ ಠಾಣೆಗೆ ಬಂದು ಆರೋಪಿಯನ್ನು ಬಂಧಿಸುವಂತೆ ಅಂಗಲಾಚಿದರೂ ಪೊಲೀಸರು ಕ್ಯಾರೆ ಅನ್ನಲಿಲ್ಲ. ಬದಲಿಗೆ ಅತ್ಯಾಚಾರಿಗಳ ಕುಟುಂಬಸ್ಥರು ಮಾರುತಿ ಕುಟುಂಬಸ್ಥರ ಸದಸ್ಯನ ವಿರುದ್ಧ ನೀಡಿದ ದೂರು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಎಸ್ಪಿ ಡಾ.ಸಿಮಿ ಮಾರಿಯಮ್ ಜಾಜರ್್, ಎಎಸ್ಪಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ತಾಯಪ್ಪ ದೊಡ್ಡಮನಿ, ಸಿಪಿಐ ಶಂಕರಗೌಡ ಪಾಟೀಲ್, ಪಿಎಸ್ಐ ಹುಸೇನ್ ಬಾಷಾ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ರಾತ್ರಿ ಊಟ ಮಾಡಿ ಮಲಗಿದ್ದಾಗ 12 ಗಂಟೆ ಸುಮಾರಿಗೆ ಮೂವರು ಮುಸುಕುಧಾರಿಗಳು ಮನೆ ಹೊಕ್ಕು ಚಾಕುವಿನಿಂದ ನನ್ನ ತಂದೆ, ತಾಯಿಯ ಕತ್ತು ಕೊಯ್ದು ಪರಾರಿಯಾಗಿದ್ದಾರೆ.
| ಆಶಿಕ್ ಕೊಲೆಯಾದ ದಂಪತಿ ಮಗ