ಮೈಸೂರು: ಪ್ರತಿದಿನವೂ ಪತ್ರಿಕೆ ಓದುವ ಅಭ್ಯಾಸ ಮಾಡಿಕೊಳ್ಳುವುದರಿಂದ ಜ್ಞಾನ ವೃದ್ಧಿಗೊಳ್ಳುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ.ಸವಿತಾ ಹೇಳಿದರು.
ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಟರಾಜ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ವೇದಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ನಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳಬಾರದು. ನಮ್ಮಲ್ಲಿರುವ ಪ್ರತಿಭೆ ಹೊರಹಾಕಲು ತುದಿಗಾಲಿನಲ್ಲಿ ನಿಂತಿರಬೇಕು. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯವಾದುದು ಎಂದರು.
ವಿದ್ಯಾರ್ಥಿ ಜೀವನ ಬಂಗಾರದ ಜೀವನ. ಹೀಗಾಗಿ ಪ್ರತಿ ಹೆಜ್ಜೆಯೂ ಬಹಳ ಶಿಸ್ತಿನಿಂದ ಕೂಡಿರಬೇಕು. ಜೀವನ ಎಂಬುದೇ ಒಂದು ಹೋರಾಟ. ಜ್ಞಾನ ಹೆಚ್ಚಿಸಿಕೊಳ್ಳುವ ಹಂತವಿದು. ಅದನ್ನು ಬಹಳ ಜಾಗರೂಕತೆಯಿಂದ ನಿರ್ವಹಿಸಬೇಕು. ಹೆಣ್ಣಿನ ಜೀವನ ಕನ್ನಡಿ ಇದ್ದಂತೆ. ಅದು ಒಡೆದು ಹೋದರೆ ಮತ್ತೆ ಜೋಡಿಸಲು ಸಾಧ್ಯವಿಲ್ಲ. ಪ್ರತಿಭೆಯಿದ್ದರೆ ಸನ್ಮಾನ ನಮ್ಮನ್ನು ಹಿಂಬಾಲಿಸುತ್ತದೆ ಎಂದು ಕಿವಿಮಾತು ಹೇಳಿದರು.
ಚಿಂತಕಿ ಡಾ.ಎ.ಪುಷ್ಪಾ ಅಯ್ಯಂಗಾರ್ ಮಾತನಾಡಿ, ವಿದ್ಯಾರ್ಥಿಗಳು ದೇಶದ ಆಧಾರ ಸ್ತಂಭ. ಹೊಸಮಠವು ಸಮಾಜ ಸೇವೆಯಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಒತ್ತು ಕೊಡುತ್ತಾ ಬಂದಿದೆ ಎಂದರು.
ಈ ಸಂಸ್ಥೆಯಲ್ಲಿ ವಿದ್ಯೆ ಪಡೆದಂತಹ ಎಷ್ಟೋ ವಿದ್ಯಾರ್ಥಿಗಳು ಹಲವಾರು ಉನ್ನತ ಸ್ಥಾನ ಪಡೆದಿದ್ದಾರೆ. ಈ ವಿದ್ಯಾಸಂಸ್ಥೆಯಲ್ಲಿ ದೊರಕುತ್ತಿರುವ ಸೌಲಭ್ಯ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ದೇಶದ ಸತ್ಪ್ರಜೆಗಳಾಗಿ ಬೆಳೆಯಬೇಕು. ನಮ್ಮ ಸಂಸ್ಕೃತಿ ಪ್ರತಿಯೊಬ್ಬ ಹೆಣ್ಣು ಅನುಸರಿಸಬೇಕು. ನಾವು ಎಲ್ಲೇ ಇದ್ದರೂ ನಾವು ನಮ್ಮ ಮಾತೃಭೂಮಿಗೆ ಋಣಿಯಾಗಿರಬೇಕು ಎಂದರು.
ಶ್ರೀನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ಪ್ರತಿಭೆ ಇದ್ದರೆ ಪುರಸ್ಕಾರ ತಾನೇ ಹುಡುಕಿಕೊಂಡು ಬರುತ್ತದೆ. ಬದುಕಿನಲ್ಲಿ ಬಡತನವಿದ್ದರೂ ಪ್ರತಿಭೆಯಲ್ಲಿ ಬಡತನವಿಲ್ಲ. ಇಂತಹ ವೇದಿಕೆಗಳು ಪ್ರತಿಭೆಯನ್ನು ಅನಾವರಣಗೊಳಿಸಲು ಸಹಾಯಕವಾಗುತ್ತವೆ. ಅದೇ ರೀತಿ ಶ್ರಮ ಇದ್ದ ಕಡೆ ಪುರಸ್ಕಾರ ಇದ್ದೇ ಇರುತ್ತದೆ ಎಂದರು.
ಪ್ರತಿಭೆಗೆ ಯಾವುದೇ ಜಾತಿ, ಧರ್ಮ, ವರ್ಗ ಇರುವುದಿಲ್ಲ. ಎಲ್ಲರೂ ಮನುಜ ಮತದ ಮೂಲಕ ವಿಶ್ವ ಪಥವನ್ನು ಸಾಧಿಸಬೇಕು. ಅದಕ್ಕೆ ಶ್ರೀ ನಟರಾಜ ಕಾಲೇಜು ಪೂರಕವಾಗಿ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದರು.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಶ್ರೀ ನಟರಾಜ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜಮುಖಿ ಚಿಂತಕ ಎ.ವೈದೇಹಿ, ಪ್ರಾಂಶುಪಾಲೆ ಡಾ.ಎಂ.ಶಾರದಾ, ಸಾಂಸ್ಕೃತಿಕ ವೇದಿಕೆಯ ಎಂ.ಎಸ್.ಸಂಧ್ಯಾರಾಣಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಎನ್.ತ್ರಿವೇಣಿ,ಕ್ರೀಡಾ ವೇದಿಕೆ ಕೆ.ಎಂ.ಹೇಮಾವತಿ ಇನ್ನಿತರರಿದ್ದರು. ನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.