ಧಾರವಾಡ: ಕೇಂದ್ರ ಸರ್ಕಾರ ವಿವಿಧ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಪ್ರತಿದಿನ ಸುಮಾರು 30 ಕಿ.ಮೀ.ಗೂ ಅಧಿಕ ರಾಷ್ಟ್ರೀಯ ಹೆದ್ದಾರಿ ನಿರ್ವಿುಸುತ್ತಿದೆ. ರಾಜ್ಯಕ್ಕೆ ಪ್ರಸಕ್ತ ಸಾಲಿನಲ್ಲಿ 2000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಲು ತಾತ್ವಿಕ ಒಪ್ಪಿಗೆ ದೊರೆತಿರುವುದು ಸಂತಸ ತಂದಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಭಾರತ ಸರ್ಕಾರದ ಭೂಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವರ್ಚುವಲ್ ವೇದಿಕೆಯಲ್ಲಿ (ಆನ್ಲೈನ್) 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾಹಿತಿ ನೀಡಿದರು.
ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಇಲಾಖೆಯಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಹೆದ್ದಾರಿಗಳ ಅಭಿವೃದ್ಧಿ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ದೇಶದ ಭವಿಷ್ಯದ ದೂರದೃಷ್ಟಿಯೊಂದಿಗೆ ಅನುಷ್ಠಾನಗೊಳಿಸುತ್ತಿದ್ದಾರೆ. ಇದಕ್ಕಾಗಿಯೇ ಹೊಸ ನೀತಿ ರೂಪಿಸಿದ್ದಾರೆ. ಈ ನೀತಿಗೆ ಎಲ್ಲ ರಾಜ್ಯ ಸರ್ಕಾರಗಳ ಸಹಕಾರ ಅತಿ ಮುಖ್ಯ. ಕರ್ನಾಟಕ ಮತ್ತು ದಕ್ಷಿಣ ಭಾರತದ ಅನೇಕ ರಾಜ್ಯಗಳಿಗೆ ಮಹತ್ವದ ಯೋಜನೆಗಳು ಅನುಷ್ಠಾನವಾಗಿವೆ. ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್ ಜಂಕ್ಷನ್ ನಿರ್ವಣಕ್ಕೆ ಕೇಂದ್ರ ಸರ್ಕಾರ ಬಹುತೇಕ ಒಪ್ಪಿಗೆ ನೀಡಿರುವುದು ಅಭಿನಂದನೀಯ ಎಂದರು. ವರ್ಚುವಲ್ (ಆನ್ಲೈನ್) ಕಾರ್ಯಕ್ರಮದಲ್ಲಿ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ, ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ. ದೇವೆಗೌಡ, ಇತರರು ಪಾಲ್ಗೊಂಡಿದ್ದರು.
ಕಾಮಗಾರಿಗಳಿಗೆ ಶಿಲಾನ್ಯಾಸ: ರಾಜ್ಯದ ವಿವಿಧ ಕಾಮಗಾರಿಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಆನ್ಲೈನ್ ಮೂಲಕ ಚಾಲನೆ ನೀಡಿದರು. ಶಿರಸಿ - ಕುಮಟಾ - ಬೇಲೆಕೇರಿ ಬಂದರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವ (ರಾಷ್ಟ್ರೀಯ ಹೆದ್ದಾರಿ 766 ಇ ಮತ್ತು 766 ಇಇ, ಇದರ ಒಟ್ಟು ಉದ್ದ 58.9 ಕಿ.ಮೀ.) 440.16 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಮಾಜಾಳಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥವನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಿದರು. ಚಿತ್ರದುರ್ಗ-ಶಿವಮೊಗ್ಗ ರಸ್ತೆ ನವೀಕರಣ, ಚಿತ್ರದುರ್ಗ-ಶಿವಮೊಗ್ಗ ದ್ವಿಪಥ ರೈಲ್ವೆ ಮೇಲ್ಸೇತುವೆ, ಬೈಂದೂರು-ರಾಣೆಬೆನ್ನೂರು ರಸ್ತೆಯ 7 ಕಿರು ಸೇತುವೆ ಮರು ನಿರ್ವಣ, ಸೊಲ್ಲಾಪುರ-ಮಂಗಳೂರು ಹೆದ್ದಾರಿಯ ಮಧ್ಯಂತರ ಪಥದಿಂದ ದ್ವಿಪಥದ ರಸ್ತೆ ಅಗಲೀಕರಣ, 13.54 ಕೋಟಿ ರೂ. ವೆಚ್ಚದಲ್ಲಿ ತುಮಕೂರು-ಹೊನ್ನಾವರ ಹೆದ್ದಾರಿಯ ಚೋರಡಿ ಬಳಿ ಹೊಸ ಸೇತುವೆ ಉದ್ಘಾಟನೆ ನಡೆಯಿತು.</