ಜಿಲ್ಲೆ

ದಿಢೀರ್ ಮುಷ್ಕರ, ಪ್ರಯಾಣಿಕರು ತತ್ತರ

ಗದಗ: ರಾಜ್ಯ ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರು ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಯಾವುದೇ ಮುನ್ಸೂಚನೆ ಇಲ್ಲದೆ ಶುಕ್ರವಾರ ಸಾರಿಗೆ ಸಂಸ್ಥೆ ಸಿಬ್ಬಂದಿ ದಿಢೀರ್ ಮುಷ್ಕರ ಆರಂಭಿಸಿದ್ದರಿಂದ ಬಸ್ ಸಂಚಾರ ಇಲ್ಲದೆ ಸಾರ್ವಜನಿಕರು ಪರದಾಡಿದರು. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಕಂಡುಬಂದಿತು.

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗುರುವಾರ ಸರ್ಕಾರದೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿದ್ದರಿಂದ ಸಾರಿಗೆ ಸಂಸ್ಥೆ ಯೂನಿಯನ್ ಪದಾಧಿಕಾರಿಗಳು ಕರೆ ನೀಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ಸಿಬ್ಬಂದಿ ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಕೆಲಸಕ್ಕೆ ಹಾಜರಾಗಬೇಕೆಂದು ಬಸ್ ನಿಲ್ದಾಣ, ಬಸ್ ಡಿಪೋಗೆ ಆಗಮಿಸಿದ್ದ ಅನೇಕ ಚಾಲಕ, ನಿರ್ವಾಹಕರನ್ನು ಯೂನಿಯನ್ ಮುಖಂಡರು ತಡೆದರು. ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ, ಹೀಗಾಗಿ ಯಾವುದೇ ಕಾರಣಕ್ಕೂ ಕರ್ತವ್ಯಕ್ಕೆ ಹಾಜರಾಗಬಾರದು ಎಂದು ಮುಖಂಡರು ತಿಳಿಸಿದ್ದರಿಂದ ಅನೇಕ ಸಿಬ್ಬಂದಿ ವಾಪಸ್ ತೆರಳಿದರು.

ಖಾಸಗಿಯವರಿಂದ ದುಪಟ್ಟು ಹಣ ವಸೂಲಿ

ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಟೆಂಪೋ, ಕ್ರೂಸರ್, ಟಂಟಂ ಮುಂತಾದ ಖಾಸಗಿ ವಾಹನಗಳಿಗೆ ಫುಲ್ ಡಿಮ್ಯಾಂಡ್. ಬಸ್ ಸಂಚಾರ ಇಲ್ಲದ್ದರಿಂದ ಖಾಸಗಿ ವಾಹನಗಳ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ್ದು ಕಂಡುಬಂದಿತು. ಕೊಪ್ಪಳ, ಮುಂಡರಗಿ, ಹುಬ್ಬಳ್ಳಿ, ರೋಣ, ನರಗುಂದ, ಗಜೇಂದ್ರಗಡಕ್ಕೆ ತೆರಳುವ ಪ್ರಯಾಣಿಕರು ಕ್ರೂಸರ್ ಮತ್ತಿತರರ ಖಾಸಗಿ ವಾಹನಗಳಲ್ಲಿ ದುಪ್ಪಟ್ಟು ಹಣ ತೆತ್ತು ಪ್ರಯಾಣಿಸಿದರು.

50 ಲಕ್ಷ ರೂ. ನಷ್ಟ

ಗದಗ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆ ಬಸ್ ಸಂಚರಿಸದಿದ್ದರೆ ದಿನಕ್ಕೆ 50 ಲಕ್ಷ ರೂ. ಸಂಸ್ಥೆಗೆ ನಷ್ಟವಾಗುತ್ತದೆ. ಜಿಲ್ಲೆಯಲ್ಲಿ 489 ಮಾರ್ಗಗಳಲ್ಲಿ ಬಸ್​ಗಳು ಸಂಚರಿಸುತ್ತವೆ. ಮುಷ್ಕರದಿಂದ ಶುಕ್ರವಾರ ಬೆಳಗ್ಗೆಯಿಂದ ಒಂದೇ ಒಂದು ಬಸ್ ಸಹ ಸಂಚರಿಸಿಲ್ಲ. ಚಾಲಕ, ನಿರ್ವಾಹಕರು ಮತ್ತು ಮೆಕ್ಯಾನಿಕ್​ಗಳು ಕರ್ತವ್ಯಕ್ಕೆ ಹಾಜರಾಗಿಲ್ಲ. ಸರ್ಕಾರದಿಂದ ಬರುವ ನಿರ್ದೇಶನದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.| ಎಫ್.ಸಿ. ಹಿರೇಮಠ, ವಿಭಾಗೀಯ ನಿಯಂತ್ರಣಾಧಿಕಾರಿ, ವಾಕರಸಾ ಸಂಸ್ಥೆ, ಗದಗ

ನಿಲ್ದಾಣದಲ್ಲೇ ನೌಕರರ ಟೈಂಪಾಸ್

ಮುಂಡರಗಿ: ಮುಷ್ಕರದ ಹಿನ್ನೆಲೆಯಲ್ಲಿ ಪಟ್ಟಣದ ಬಸ್ ನಿಲ್ದಾಣವು ಸ್ತಬ್ಧವಾಗಿತ್ತು. ಕೆಎಸ್​ಆರ್​ಟಿಸಿ ಬಸ್ ಸಂಚಾರ ಬಂದ್​ನಿಂದಾಗಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ವಣವಾಗಿತ್ತು. ಮುಷ್ಕರ ಗೊತ್ತಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸಿದರು. ಕೆಲವರು ಖಾಸಗಿ ವಾಹನಗಳು ಸಿಗದೆ ಪರದಾಡಿದರು. ಕೆಎಸ್​ಆರ್​ಟಿಸಿ ನೌಕರರು ಬಸ್ ನಿಲ್ದಾಣದಲ್ಲೇ ಕುಳಿತು ಕಾಲ ಕಳೆದರು.

ಕೆಎಸ್​ಆರ್​ಟಿಸಿ ನೌಕರ ಎಂ.ಕೆ. ಕುಂಬಾರಗೇರಿ ಮಾತನಾಡಿ, ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಸರ್ಕಾರದಿಂದ ದೊರೆಯುವ ಎಲ್ಲ ಸವಲತ್ತು ಕಲ್ಪಿಸಬೇಕು ಎಂದು ಹಲವು ವರ್ಷಗಳಿಂದ ಮನವಿ ಮಾಡಿಕೊಳ್ಳಲಾಗುತ್ತಿದೆ. ಆದರೆ, ಈ ಬಗ್ಗೆ ಸರ್ಕಾರ ಸ್ಪಂದಿಸುವ ಕೆಲಸಕ್ಕೆ ಮುಂದಾಗದಿರುವುದು ಬೇಸರದ ಸಂಗತಿಯಾಗಿದೆ. ಆದಷ್ಟು ಬೇಗ ಸರ್ಕಾರ ಸಾರಿಗೆ ನೌಕರರ ಬೇಡಿಕೆ ಈಡೇರಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ನೌಕರರಾದ ಎಚ್.ಟಿ. ಗುಗ್ಗರಿ, ಎ.ಜಿ. ನಾಯಕ, ಮಹಾದೇವಪ್ಪ ತಳವಾರ, ಸಿ.ಎಂ. ಕಂತಿ, ಎಸ್.ಎನ್. ಲಿಂಗಶೆಟ್ಟರ್, ಎಚ್.ಆರ್. ಜೋಗನವರ, ಸಿ.ಡಿ. ಚಲವಾದಿ, ಸಿ.ಎಸ್. ಗುಡ್ಡದ, ಉಮೇಶ ಹಾರೋಗೇರಿ, ಬಸವರಾಜ ಕೊಡ್ಲಿ, ಇತರರಿದ್ದರು.

ಬಿಕೋ ಎನ್ನುತ್ತಿದ್ದ ಬಸ್ ನಿಲ್ದಾಣ

ನರೇಗಲ್ಲ: ನರೇಗಲ್ಲ ಸೇರಿದಂತೆ ಹೋಬಳಿಯಾದ್ಯಂತ ಪ್ರಯಾಣಿಕರು ಪರದಾಡಿದರು. ಬಸ್ ಬಂದ್ ಬಗ್ಗೆ ಮಾಹಿತಿ ಇಲ್ಲದೆ, ಬಸ್ ನಿಲ್ದಾಣಕ್ಕೆ ಬಂದ ಸಾರ್ವಜನಿಕರು ಅನಿವಾರ್ಯವಾಗಿ ಖಾಸಗಿ ವಾಹನಗಳತ್ತ ಮುಖ ಮಾಡಿದರು. ದಿನನಿತ್ಯ ಸಾವಿರಾರು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು.

ಬಸ್​ಗಾಗಿ ಕಾದು ಸುಸ್ತಾದ ಜನ

ಲಕ್ಷ್ಮೇಶ್ವರ: ಕೆಎಸ್​ಆರ್​ಟಿಸಿ ನೌಕರರು ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದರ ಜತೆಗೆ ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸಿ ಶುಕ್ರವಾರ ಏಕಾಏಕಿ ಕೆಲಸಕ್ಕೆ ಗೈರುಹಾಜರಾದ ಪರಿಣಾಮ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.

ಸಾರಿಗೆ ನೌಕರ ಪ್ರತಿಭಟನೆ ಬಗ್ಗೆ ಯಾವುದೇ ಮಾಹಿತಿ ಇಲ್ಲದ್ದರಿಂದ ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಬಸ್ ಬರುವಿಕೆಗಾಗಿ ಸುಸ್ತಾದರು. ದಿನವಿಡೀ ಯಾವುದೇ ಬಸ್ ನಿಲ್ದಾಣ ಪ್ರವೇಶಿಸದ್ದರಿಂದ ಬಿಕೋ ಎನ್ನುವ ವಾತಾವರಣವಿತ್ತು.

ಲಕ್ಷ್ಮೇಶ್ವರ ವಿಭಾಗದಲ್ಲಿ ಚಾಲಕ-ನಿರ್ವಾಹಕ ಮತ್ತು ಇತರೆ ಸಿಬ್ಬಂದಿ ಸೇರಿ ಒಟ್ಟು 320ಕ್ಕೂ ಹೆಚ್ಚು ನೌಕರರಿದ್ದಾರೆ. ನಿತ್ಯ ಒಟ್ಟು 70 ಶೆಡ್ಯೂಲ್​ಗಳ ಸಂಚಾರವಿದೆ. ಶುಕ್ರವಾರ ಏಕಾಏಕಿ ನೌಕಕರು ಕೆಲಸಕ್ಕೆ ಗೈರು ಹಾಜರಾಗಿದ್ದರಿಂದ ಸಾರಿಗೆ ಸಂಪೂರ್ಣ ಸ್ಥಗಿತವಾಯಿತು. ಎಲ್ಲ ಬಸ್​ಗಳನ್ನು ಡಿಪೋದಲ್ಲಿ ನಿಲ್ಲಿಸಲಾಗಿದೆ. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ನಡೆದುಕೊಳ್ಳಲಾಗುವುದು. | ಶೇಖರ ನಾಯಕ ಡಿಪೋ ಮ್ಯಾನೇಜರ್, ಲಕ್ಷ್ಮೇಶ್ವರ

ಬಸ್ ಸಂಚಾರವಿಲ್ಲದೆ ಪರದಾಟ

ನರಗುಂದ: ನರಗುಂದ ಘಟಕದ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿ ಮುಷ್ಕರಕ್ಕೆ ಶುಕ್ರವಾರ ಬೆಂಬಲ ನೀಡಿದ ಪರಿಣಾಮ ಪ್ರಯಾಣಿಕರು ಬಸ್ ಸಂಚಾರ ಇಲ್ಲದೆ ಪರದಾಡಬೇಕಾಯಿತು. ಹುಬ್ಬಳ್ಳಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿ ವಿವಿಧ ನಗರಗಳಿಗೆ ತೆರಳಬೇಕಿದ್ದ ಬಸ್​ಗಳ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡಿದರು. ಬೇರೆಡೆಯಿಂದ ಕೆಲವೊಂದು ಬಸ್​ಗಳು ನರಗುಂದ ಮಾರ್ಗವಾಗಿ ಸಂಚರಿಸಿದರೂ ಕೂಡ ಬಹುತೇಕ ಪ್ರಯಾಣಿಕರು ಹೆಚ್ಚುವರಿ ಹಣ ನೀಡಿ ಖಾಸಗಿ ವಾಹನಗಳಲ್ಲಿ ಸಂಚರಿಸುವಂತಾಯಿತು.

ಡಿಪೋಗೆ ಬೀಗ ಜಡಿದು ಪ್ರತಿಭಟನೆ

ರೋಣ: ಪಟ್ಟಣದಲ್ಲಿ ಸಾರಿಗೆ ನೌಕರರು ಡಿಪೋಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಸಾರಿಗೆ ನೌಕರ ಬಸವರಾಜ ಹೊಸಮನಿ ಮಾತನಾಡಿ, ‘ಸಾರಿಗೆ ನೌಕರರನ್ನು ಸರ್ಕಾರ ಕಡೆಗಣಿಸಬಾರದು. ಆ ರೀತಿ ಮಾಡಿದರೆ, ನಾವು ಸುಮ್ಮನಿರುವುದಿಲ್ಲ. ನಮ್ಮ ಮುಖಂಡರು ಬೆಂಗಳೂರಿನಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರನ್ನು ಭೇಟಿ ಮಾಡಿದಾಗ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈಗ ಸಾರಿಗೆ ನೌಕರರ ಶಕ್ತಿಯನ್ನು ಪ್ರದರ್ಶಿಸುವ ಕಾಲ ಬಂದಿದೆ’ ಎಂದರು.

ನಸುಕಿನ ಜಾವಾ ಬಾಗಲಕೋಟೆಯಿಂದ ಗದಗಕ್ಕೆ ಹೋಗುವ ಬಸ್ಸಿಗೆ ಬಂದ ಪ್ರಯಾಣಿಕರನ್ನು ರೋಣ ಬಸ್ ನಿಲ್ದಾಣದಲ್ಲಿ ತಡೆದ ಪ್ರತಿಭಟನಾ ನಿರತರು ಸಾರಿಗೆ ಬಸ್ ಅನ್ನು ಡಿಪೋದಲ್ಲಿ ನಿಲ್ಲಿಸಿ, ಪ್ರಯಾಣಿಕರನ್ನು ಖಾಸಗಿ ವಾಹನವೊಂದರ ಮೂಲಕ ಗದಗಕ್ಕೆ ಕಳಿಸಿದ ಘಟನೆ ನಡೆಯಿತು.

ಪ್ರಕಾಶ ಬಸೇಗೌಡ್ರ, ಮುತ್ತಣ್ಣ ಸೊಬಗಿನ, ಬಿ.ಎನ್. ಬೆನಕನವಾರಿ, ರಾಮಣ್ಣಾ ಕಾತರಕಿ, ಬಿ.ಕೆ. ಮಾದರ, ಎಂ.ಎಂ. ಕರ್ನಾಚಿ, ಪಾತೀಮಾ ಮುಲ್ಲಾ, ರೇಣುಕಾ ಹಾಳಕೇರಿ ಸೇರಿದಂತೆ ಅನೇಕರಿದ್ದರು.

ಖಾಸಗಿ ವಾಹನಗಳ ದರ್ಬಾರ್

ಗಜೇಂದ್ರಗಡ: ಸಾರಿಗೆ ನೌಕರರ ದಿಢೀರ್ ಪ್ರತಿಭಟನೆಯಿಂದಾಗಿ ಶುಕ್ರವಾರ ಪಟ್ಟಣದ ತುಂಬ ಖಾಸಗಿ ವಾಹನಗಳ ಕಾರುಬಾರು ಜೋರಾಗಿತ್ತು. ಬೆಳಗ್ಗೆಯಿಂದಲೇ ಸೇವೆ ಸ್ಥಗಿತಗೊಳಿಸಿ ಸಾರಿಗೆ ನೌಕರರು ಪ್ರತಿಭಟಿಸಿದ್ದರಿಂದ ಬಸ್​ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಯಿತು.

ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುವ ಸಾರ್ವಜನಿಕರಿಗೆ ಹಾಗೂ ನೌಕರರು ತೀವ್ರ ತೊಂದರೆ ಅನುಭವಿಸಬೇಕಾಯಿತು. ಪ್ರಯಾಣಿಕರು ಗಂಟೆಗಟ್ಟಲೇ ಕಾದರೂ ಬಸ್ ಬಾರದ್ದರಿಂದ ಅನಿವಾರ್ಯವಾಗಿ ಕ್ರೂಸರ್, ಟಂಟಂ, ಟೆಂಪೋಗಳ ಮೊರೆ ಹೋಗಬೇಕಾಯಿತು. ಇದರ ಲಾಭ ಪಡೆದ ಕೆಲ ಖಾಸಗಿ ವಾಹನಗಳ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ಪಡೆದರು.