ಮೈಸೂರು: ನಶಿಸಿ ಹೋಗುತ್ತಿರುವ ತಳಸಮುದಾಯಗಳ ವಿಶಿಷ್ಟ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ‘ಮೂಲ ಸಂಸ್ಕೃತಿಕ ಕನ್ನಡ ಸಂಸ್ಕೃತಿ’ ಶಿಬಿರದ ಸಮಾರೋಪ ಸಮಾರಂಭ ಹಾಗೂ ತರಬೇತಿ ಪಡೆದ ಕಲಾವಿದರಿಂದ ಕಲಾಪ್ರದರ್ಶನ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಶುಕ್ರವಾರ ನಡೆಯಿತು.
ಸಮಾರಂಭ ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾತನಾಡಿ, ಕಲಿಕೆಗೆ ಕೊನೆ ಎಂಬುದೇ ಇಲ್ಲ. ಇಲ್ಲಿ ತರಬೇತಿ ಪಡೆದ ಕಲಾವಿದರು ಕಲಿಕೆಯನ್ನು ಮೊದಲ ಹೆಜ್ಜೆ ಎಂದು ತಿಳಿದು ನಿರಂತರ ಕಲಿಕೆಯ ಕಡೆಗೆ ಗಮನ ಹರಿಸಬೇಕು. ಆದರೆ ಇಂದಿನ ಅವಸರದ ಯುಗದಲ್ಲಿ ದಿಢೀರಾಗಿ ಕಲಾವಿದನಾಗಬೇಕು, ಹೆಸರು ಮಾಡಬೇಕು ಎಂದು ಹೆಚ್ಚಿನ ಜನರು ಬಯಸುತ್ತಾರೆ. ಯಾವುದೇ ಉನ್ನತ ಸಾಧನೆ ತೋರಬೇಕಾದರೆ ನಿರಂತರ ಕಲಿಕೆ ಹಾಗೂ ತಾಳ್ಮೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಕಲಾವಿದರಾಗಲು ಬಯಸುವವರು ಮೊದಲು ಕಲೆಯ ಮಹತ್ವ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಕಲೆಯ ಮಹತ್ವ ತಿಳಿದು ಕೊಳ್ಳುವ ಪ್ರಯತ್ನ ಮಾಡದೆ ಇದ್ದರೆ ಉತ್ತಮ ಕಲಾವಿದರಾಗಿ ರೂಪುಗೊಳ್ಳಲು ಸಾಧ್ಯವಿಲ್ಲ. ಕೇವಲ ಕಲೆ ಮಾತ್ರವಲ್ಲ ಯಾವುದೇ ವೃತ್ತಿಯನ್ನಾದರೂ ನಾವು ಕೈಗೊಳ್ಳುವ ಮುನ್ನ ಆ ವೃತ್ತಿಯ ಕುರಿತು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಇಲ್ಲವಾದಲ್ಲಿ ಯಶಸ್ಸು ದೊರೆಯುವುದು ಕಷ್ಟ ಎಂದರು.
ಮೇಯರ್ ಶಿವಕುಮಾರ್ ಮಾತನಾಡಿ, ನಶಿಸಿ ಹೋಗುತ್ತಿರುವ ಕಲೆ, ಸಂಸ್ಕೃತಿ ಉಳಿಸಲು ಸರ್ಕಾರ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ. ಅಮೂಲ್ಯವಾದ ಕಲೆ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಮೂಲಕ ಉಳಿಸುವ ಕಾರ್ಯ ಆಗಬೇಕು ಎಂದರು.
ವೇದಿಕೆಯಲ್ಲಿ ಉಪ ಮೇಯರ್ ಡಾ.ಜಿ. ರೂಪಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಸುದರ್ಶನ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ವಿಶ್ವವಿದ್ಯಾಲಯ ಪ್ರಸಾರಾಂಗ ನಿರ್ದೇಶಕ ನಂಜಯ್ಯ ಹೊಂಗನೂರು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು, ‘ಮೂಲ ಸಂಸ್ಕೃತಿಕ ಕನ್ನಡ ಸಂಸ್ಕೃತಿ’ ಶಿಬಿರದ ವಿಭಾಗೀಯ ಸಂಚಾಲಕ ಎಂ.ಎಸ್. ಪರಮಾನಂದ, ಜಿಲ್ಲಾ ಸಂಚಾಲಕರಾದ ಶರತ್, ನಿಂಗರಾಜ್, ತಂಬೂರಿ ನೀಲಗಾರ ಕಲಾವಿದ ಮೈಸೂರು ಗುರುರಾಜ್, ಜಾನಪದ ಕಲಾವಿದ ಹೊನ್ನೇಗೌಡ, ರಂಗಕರ್ಮಿ ಪುಟ್ಟಣ್ಣಯ್ಯ, ನೀಲ ಸೋಬಾನೆ ಕಲಾವಿದೆ ಚಿಕ್ಕಮಂಚಮ್ಮ ಹಾಗೂ ಇತರರು ಇದ್ದರು.