ಜಿಲ್ಲೆ

ದಿಕ್ಕಿಲ್ಲದೆ ಸಾಗುತ್ತಿರುವ ಮಾಧ್ಯಮ ಕ್ಷೇತ್ರ:  ನಿವೃತ್ತ ಪ್ರಾಧ್ಯಾಪಕ ಡಾ.ಕೆ.ವಿ.ನಾಗರಾಜು ಆತಂಕ

ಮೈಸೂರು: ರೋಟರಿ ಮೈಸೂರು ಮಿಡ್‌ಟೌನ್ ವತಿಯಿಂದ ಆಕಾಶವಾಣಿ ನಿರೂಪಕಿ ಆರ್.ಲೋಕೇಶ್ವರಿ, ಪತ್ರಕರ್ತ ಎಂ.ಟಿ.ಯೋಗೇಶ್‌ಕುಮಾರ್ ಹಾಗೂ ವ್ಯಂಗ್ಯ ಚಿತ್ರಕಾರ ಎಂ.ವಿ.ನಾಗೇಂದ್ರಬಾಬು ಅವರಿಗೆ ಸಿಲಿಕಾನ್ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಿಜೋರಾಂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ವಿ.ನಾಗರಾಜು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಇತ್ತೀಚಿನ ದಿನಗಳ ಪತ್ರಿಕೋದ್ಯಮದಲ್ಲಿ ಅಪ್ರಮಾಣಿಕತೆ ಮತ್ತು ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ದಿಕ್ಕಿಲ್ಲದೆ ಸಾಗುತ್ತಿರುವ ಮಾಧ್ಯಮ ಕ್ಷೇತ್ರವನ್ನು ಸರಿದಾರಿಗೆ ತರುವ ಕಾರ್ಯ ತುರ್ತಾಗಿ ಆಗಬೇಕಿದೆ.

ಅದರಲ್ಲೂ ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ಯುವ ಪತ್ರಕರ್ತರು ಶ್ರಮಿಸಬೇಕು ಎಂದರು.

ಮೊದಲೆಲ್ಲ ಸುದ್ದಿಗಾಗಿ ಅಲೆದಾಡಬೇಕಾದ ಪರಿಸ್ಥಿತಿ ಇತ್ತು. ಆದರೆ, ಈಗ ಕೈ ಬೆರಳ ತುದಿಯಲ್ಲೇ ಸುದ್ದಿಗಳು ದೊರೆಯುತ್ತಿವೆ. ಸುದ್ದಿಗಾಗಿ ಕಷ್ಟಪಡುವ ಪ್ರಮೇಯವೇ ಇಲ್ಲದಂತಾಗಿದೆ. ಅದರಲ್ಲೂ ದೃಶ್ಯ ಮಾಧ್ಯಮಗಳು ವಿಶ್ವಾಸ ಕಳೆದುಕೊಳ್ಳುವ ಹಂತದಲ್ಲಿವೆ.

ನಾನು ಅಸ್ಸಾಂನಲ್ಲಿದ್ದಾಗ ಸಾಮಾಜಿಕ ಜಾಲತಾಣದಿಂದ ಭಯದ ವಾತಾವರಣ ಸೃಷ್ಟಿಯಾಗಿತ್ತು. ಚಿಕ್ಕ ರಾಜ್ಯದಲ್ಲೇ ಅಂತಹ ಪರಿಣಾಮ ಬೀರಿದ್ದ ಸಾಮಾಜಿಕ ಜಾಲತಾಣಗಳು ಇನ್ನೂ ದೊಡ್ಡ ರಾಜ್ಯದ ಮೇಲೆ ಬೀರುವ ಪರಿಣಾಮ ಎಷ್ಟಿರಬಹುದು ಎಂಬುದನ್ನು ಊಹಿಸಿಕೊಂಡರೆ ಭಯವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು

ಸುಳ್ಳು ಸುದ್ದಿಗಳು ಹೆಚ್ಚಾಗುತ್ತಿವೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಂದಾಗಿನಿಂದಂತೂ ಸುಳ್ಳು ಸುದ್ದಿಗಳ ಹಾವಳಿ ವಿಪರೀತವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳ ಕಡಿವಾಣ ಅತ್ಯಗತ್ಯ ಎಂದು ಹೇಳಿದರು.

ರೋಟರಿ ಮೈಸೂರು ಮಿಡ್‌ಟೌನ್ ಅಧ್ಯಕ್ಷ ಎಸ್.ಕುಮಾರಸ್ವಾಮಿ, ಸಿಲಿಕಾನ್ ಕಂಟ್ರೋಲ್ ಪ್ರೈ.ಲಿ.ನ ಎಸ್.ರಾಘವೇಂದ್ರ, ಎಂ.ಎನ್.ನವೀನ್‌ಚಂದ್ರ, ರೋಟರಿ ಮೈಸೂರು ಮಿಡ್‌ಟೌನ್ ಕಾರ್ಯದರ್ಶಿ ಎಲೈಜರ್ ಮಿಲ್ಟನ್ ಮತ್ತಿತರರು ಉಪಸ್ಥಿತರಿದ್ದರು.