ಸಿರಗುಪ್ಪ: ವಿವಿಧ ಕೃಷಿ ಪರಿಕರಗಳನ್ನು ಕಾಯ್ದೆ ಅನುಸಾರ ಮಾರಾಟ ಮಾಡಬೇಕೆಂದು ಕೃಷಿ ಇಲಾಖೆ ಉಪ ನಿರ್ದೇಶಕ ಮಂಜುನಾಥ ಹೇಳಿದರು.
ಪಟ್ಟಣದ ಸಿಡಿಪಿಒ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಕೃಷಿ ಪರಿಕರ ವಿತರಕರ ಹಾಗೂ ಮಾರಾಟಗಾರರ ಸಭೆಯಲ್ಲಿ ಸೋಮವಾರ ಮಾತನಾಡಿದರು. ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜ ಮಾರಾಟ ಸಂದರ್ಭದಲ್ಲಿ ಗುಣಮಟ್ಟ ಖಾತ್ರಿ ಪಡಿಸಿಕೊಂಡು ನಿಗದಿತ ದರದಲ್ಲಿ ಮಾರಾಟ ಮಾಡಬೇಕು. ರಸಗೊಬ್ಬರಗಳ ದಾಸ್ತಾನು ಹಾಗೂ ದರ ಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ಹೇಳಿದರು.
ವಿವಿಧ ಪರಿಕರಗಳನ್ನು ಖರೀದಿಸುವ ರೈತರಿಗೆ ರಸೀದಿಯನ್ನು ಕಡ್ಡಾಯವಾಗಿ ಸೂಕ್ತ ವಿವರಗಳೊಂದಿಗೆ ನೀಡಬೇಕು. ವಿವಿಧ ಪರಿಕರಗಳ ದಾಸ್ತಾನು ವಿವರಗಳನ್ನು ಇಲಾಖೆಗೆ ಕಾಲಕಾಲಕ್ಕೆ ಸಲ್ಲಿಸಬೇಕು. ರೈತರ ಆಧಾರ್ ಕಾರ್ಡ್ ಸಂಖ್ಯೆ ಆಧರಿಸಿ ಪಿಒಎಸ್ ಯಂತ್ರದಲ್ಲಿ ಮಾಹಿತಿ ದಾಖಲಿಸುವ ಮೂಲಕವೇ ರಸಗೊಬ್ಬರ ವಿತರಿಸಬೇಕು. ರಸಗೊಬ್ಬರ, ಬಿತ್ತನೆ ಬೀಜ ಮತ್ತು ಕೀಟನಾಶಕಗಳನ್ನು ಕಾಯ್ದೆಗಳ ಅನುಸಾರ ವಹಿವಾಟು ನಡೆಸಬೇಕು ಎಂದು ಮಂಜುನಾಥ ತಾಕೀತು ಮಾಡಿದರು.
ಜಿಲ್ಲಾ ಕೃಷಿ ಜಾಗೃತ ದಳದ ಸಹಾಯಕ ನಿರ್ದೇಶಕ ಮುಜೀಬ್ ಉರ್ ರೆಹಮನ್ ಮಾತನಾಡಿ, ವಿವಿಧ ಕೃಷಿ ಪರಿಕರಗಳನ್ನು ನಿಗದಿತ ದರದಲ್ಲಿ ಮಾರಾಟ ಮಾಡಬೇಕು. ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಡಿಎಪಿ ಗೊಬ್ಬರ ಸರಬರಾಜು ಮತ್ತು ವಿತರಣೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಡಿಎಪಿ ಗೊಬ್ಬರದ ಬದಲಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಸಂಯುಕ್ತ ಗೊಬ್ಬರಗಳನ್ನು ಬಳಸಲು ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮಾರಾಟಗಾರರಿಗೆ ಸೂಚಿಸಿದರು.
ಡಿಎಪಿ ಗೊಬ್ಬರದಲ್ಲಿ ಸಾರಜನಕ ಮತ್ತು ರಂಜಕ ಪ್ರಧಾನ ಪೋಷಕಾಂಶಗಳಾಗಿವೆ. ಬೆಳೆಗಳಿಗೆ ಬೇಕಾಗುವ ಪ್ರಮುಖ ಇನ್ನೊಂದು ಪೋಷಕಾಂಶ ಪೊಟ್ಯಾಷ್ ಇರುವುದಿಲ್ಲ. ಇದರಿಂದ ಗಿಡಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಡಿಎಪಿ ಬಳಸುವುದರಿಂದ ಮಣ್ಣಿನಲ್ಲಿ ರಂಜಕ ಅಂಶ ಹೆಚ್ಚಾಗುತ್ತದೆ. ಅಗತ್ಯವಾದ ಲಘು ಪೋಷಕಾಂಶಗಳಾದ ಸತು (ಜಿಂಕ್) ಮತ್ತು ಕಬ್ಬಿಣದ ಕೊರತೆ ಉಂಟಾಗುತ್ತದೆ. ಬೆಳೆ ಇಳುವರಿ ಕಡಿಮೆಯಾಗುತ್ತದೆ ಎಂದು ಹೇಳಿದರು.
ಶಿರಸ್ತೇದಾರ್ ಸಿದ್ದಾರ್ಥ, ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್, ಕೃಷಿ ಅಧಿಕಾರಿಗಳಾದ ಹರ್ಷ ನಾಯಕ, ಬಾಲಾಜಿ ನಾಯ್ಕ, ಪುರುಷೋತ್ತಮ, ಪರಮೇಶ್ವರ ರೆಡ್ಡಿ ಇತರರಿದ್ದರು.