ಜಿಲ್ಲೆ

ದಾಸೋಹ, ಶಿಕ್ಷಣಾಲಯ ತೆರೆದ ಮಹನೀಯ

ಚಿತ್ರದುರ್ಗ: ಬಡತನ, ನಿರುದ್ಯೋಗ ತಾಂಡವವಾಡುತ್ತಿದ್ದ 150 ವರ್ಷಗಳ ಹಿಂದೆ ಹಸಿವನ್ನು ನೀಗಿಸುವುದು ಬಹಳ ಕಷ್ಟವಿತ್ತು. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ನಾಡಿನಲ್ಲಿ ದಾಸೋಹ ಮತ್ತು ಶಿಕ್ಷಣಾಲಯಗಳನ್ನು ತೆರೆದ ಕೀರ್ತಿ ಮುರುಘಾಮಠದ ಶಿರಸಂಗಿ ಮಹಾಲಿಂಗ ಸ್ವಾಮೀಜಿ ಅವರಿಗೆ ಸಲ್ಲುತ್ತದೆ ಎಂದು ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಸ್ಮರಿಸಿದರು.

ಶ್ರೀಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಭಾನುವಾರ ನಡೆದ ವಚನಾಭಿಷೇಕ, ಮುರುಘಾ ಪರಂಪರೆಯ ಗುರುಗಳ ವ್ಯಕ್ತಿತ್ವ, ಸಾಧನೆಯ ಪಥ ದರ್ಶನದ 17ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

14ನೇ ಪೀಠಾಧ್ಯಕ್ಷರಾದ ಶಿರಸಂಗಿ ಮಹಾಲಿಂಗ ಸ್ವಾಮೀಜಿ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡಿದರು. ಶಿಕ್ಷಣ ಮತ್ತು ದಾಸೋಹ ಪರಂಪರೆಗೆ ಬುನಾದಿ ಹಾಕಿ, ಅನುಪಮ ಸೇವೆ ಸಲ್ಲಿಸಿದ್ದಾರೆ ಎಂದರು.

ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಮುರುಘಾಮಠ ಸರ್ವರನ್ನು ಸಮಾನವಾಗಿ ಕಂಡಿದೆ. ಉಳವಿಯ ರಥೋತ್ಸವದ ವೇಳೆ ಶ್ರೀಮಠದ ಚನ್ನಬಸವಣ್ಣ ಅವರ ವಚನ ಪಾರಾಯಣ ನಡೆಯುತ್ತಿದ್ದುದು ಮಹತ್ವದ ಸಂಗತಿ. ಶಿರಸಂಗಿ ಮಹಾಲಿಂಗ ಸ್ವಾಮೀಜಿ ಸಣ್ಣಪಾದದ ಚನ್ನವೀರ ಸ್ವಾಮೀಜಿ ತರುವಾಯ ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ ಮಹನೀಯ ಎಂದು ಬಣ್ಣಿಸಿದರು.

ಎಸ್‌ಜೆಎಂ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎಸ್.ವಿ. ರವಿಶಂಕರ್, ಧರ್ಮಪ್ಪ, ಜೆ.ವಿ.ಶಿವಣ್ಣ, ಅನಸೂಯ ಆನಂದ್, ಸುವರ್ಣಮ್ಮ ಬಸವಲಿಂಗಪ್ಪ, ಎಂ.ಕೆ.ಅಭಿಷೇಕ್, ಎಸ್.ಆರ್.ಜಯಪ್ರಕಾಶ್, ಎಚ್.ಎಸ್.ಪಂಚಾಕ್ಷರಿ, ಮೆರವಣಿಗೆ ಜಯದೇವಪ್ಪ, ಎಲೆಮನೆ ಸಂಗನಬಸಪ್ಪ ಇತರರಿದ್ದರು.