ಕಲಬುರಗಿ: ತಾತ್ವಿಕ ತಳಹದಿ ಮೇಲೆ ಸಾತ್ವಿಕ ಸಮಾಜ ಸೃಷ್ಟಿಸಿದ ಶರಣ ಪರಂಪರೆಯ ದೊಡ್ಡಪ್ಪ ಅಪ್ಪ ಅವರು ಶರಣಬಸವೇಶ್ವರರ ದಾಸೋಹ ಸಂಸ್ಥಾನದಲ್ಲಿ ಎಂಟನೇ ವರ್ಷಕ್ಕೆ ದಾಸೋಹ ಕೈಂಕರ್ಯ ಕೈಗೊಂಡು, ಶಿಕ್ಷಣದ ದೀಪ ಬೆಳಗಿಸಿದ ದಾಸೋಹ ನೇಮಿ ಆಗಿ ಸಾರ್ವಕಾಲಿಕವಾಗಿದ್ದಾರೆ ಎಂದು ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯರು ನುಡಿದರು.
ಶ್ರೀ ಶರಣಬಸವೇಶ್ವರರ ದಾಸೋಹ ಸಂಸ್ಥಾನದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ದೊಡ್ಡಪ್ಪ ಅಪ್ಪ ಅವರು ಭಕ್ತರಿಗೆ ದಾಸೋಹವನ್ನು ಅತ್ಯಂತ ಕಾಳಜಿ, ಪ್ರೀತಿಯಿಂದ ಉಣಿಸುತ್ತಿದ್ದರು. ಶರಣಬಸವೇಶ್ವರರ ವಿದ್ಯಾವರ್ಧಕ ಸಂಘ ಸ್ಥಾಪಿಸಿ ಅಕ್ಷರ ದಾಸೋಹದ ದೀಪ ಹಚ್ಚಿದ್ದು, ಇಂದು ಬೃಹತï ಆಗಿ ಬೆಳೆದು ಕಲ್ಯಾಣದ ನಾಡು ಬೆಳಗುತ್ತಿದೆ ಎಂದು ಬಣ್ಣಿಸಿದರು.
ದೊಡ್ಡಪ್ಪ ಅಪ್ಪ ಅವರು ಗ್ರಂಥಾಲಯ, ಮಹಾದೇವಿ ಕನ್ಯಾ ಪ್ರೌಢ ಶಾಲೆ ಸೇರಿ ಬೇರೆ ಬೇರೆ ಶಾಲೆಗಳನ್ನು ಆರಂಭಿಸಿ ಅಕ್ಷರ ದಾಸೋಹಕ್ಕೆ ಭದ್ರ ಬುನಾದಿ ಹಾಕಿದರು. ತಮ್ಮ ಇಡೀ ಜೀವನ ಸಮಾಜದ್ದು ಎಂದು ಬದುಕಿದ್ದರು. ಚಿ.ದೊಡ್ಡಪ್ಪ ಅಪ್ಪ ಅವರು ಲಿಂಗೈಕ್ಯ ದೊಡ್ಡಪ್ಪ ಅಪ್ಪ ಅವರ ಮಾರ್ಗದಲ್ಲಿ ಸಾಗುತ್ತಿದ್ದಾರೆ ಎಂದರು.
ಚೌದಾಪುರಿಯ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿ, ಗುರು ಲಿಂಗ ಜಂಗಮ ಸ್ವರೂಪಿಗಳಾಗಿದ್ದ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಆಚಾರ, ವಿಚಾರ, ಸಂಸ್ಕಾರವನ್ನು ಬಿತ್ತಿ, ದಾಸೋಹ ಪೀಠದಲ್ಲಿ ಕುಳಿತು ದಾಸೋಹ ಬೆಳೆಸಿದರು. ಕನ್ನಡ ಮಾತನಾಡುವುದೇ ದುಸ್ತರ ಎಂದಾಗ ಕನ್ನಡ ಶಾಲೆ ಆರಂಭಿಸ್ದಿರು. ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ದುಡಿದು ಎಲ್ಲರ ಮಧ್ಯೆ ಅವರ ಕಾಯಕದ ಮೂಲಕವೇ ಚಿರಸ್ಥಾಯಿಯಾಗಿದ್ದಾರೆ ಎಂದರು.
ಶರಣಬಸವ ವಿವಿ ಕುಲಪತಿ ಅನೀಲಕುಮಾರ ಬಿಡವೆ ಮಾತನಾಡಿ, ದೊಡ್ಡಪ್ಪ ಅಪ್ಪ ಅವರು ಹಾಕಿದ್ದ ಭದ್ರ ಬುನಾದಿ, ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ನೇತೃತ್ವದಲ್ಲಿ ಹಿಂದುಳಿದ ಭಾಗದಲ್ಲಿ ಶೈಕ್ಷಣಿಕ ದಾಸೋಹ ಕ್ರಾಂತಿ ಮಾಡಲಾಗಿದೆ. ಶರಣಬಸವಪ್ಪ ಅಪ್ಪರ ಪ್ರಕಾರ ಬಡವರು, ಭಕ್ತರಿಂದ ಬಂದ ಹಣ ಅವರಿಗೆ ಭಿನ್ನ, ವಿಭಿನ್ನ ರೂಪದಲ್ಲಿ ವಾಪಸ್ ದೊರೆಯಬೇಕು. ಅದರಂತೆ ಎಲ್ಲ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ದೊಡ್ಡಪ್ಪ ಅಪ್ಪ ಬೆತ್ತ: ಶರಣ ಸಂಸ್ಥಾನದ ಪೂಜ್ಯ ಚಿ.ದೊಡ್ಡಪ್ಪ ಅಪ್ಪ ಅವರು ಲಿಂಗೈಕ್ಯ ದೊಡ್ಡಪ್ಪ ಅಪ್ಪ ಅವರು ಹಿಡಿದ ಬೆತ್ತ ಹಿಡಿದು ಭಾಗವಹಿಸಿ, ಪೇಟ ಸುತ್ತಿ, ದೋತಿ ತೊಟ್ಟು ಅವರಂತೆ ಭಕ್ತರಿಗೆ ಮಾರ್ಗದರ್ಶನ ನೀಡಿದ್ದು, ಗಮನ ಸೆಳೆಯಿತು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಕಾರ್ಯದರ್ಶಿ ಬಸವರಾಜ ದೇಶಮುಖ, ಚಿ.ದೊಡ್ಡಪ್ಪ ಅಪ್ಪ, ಸಂಸ್ಥಾನದ ಕು.ಭವಾನಿ, ಕು.ಶಿವಾನಿ. ಕು.ಮಹೇಶ್ವರಿ, ಶರಣಬಸವ ವಿವಿ ಕುಲಪತಿ ಅನೀಲಕುಮಾರ ಬಿಡವೆ, ಎಸ್.ಜಿ.ಡೊಳ್ಳೆಗೌಡರ, ಕಲ್ಯಾಣರಾವ ಪಾಟೀಲ್, ಡಾ.ಶಿವರಾಜ ಶಾಸ್ತಿç ಹೇರೂರ, ಡಾ.ಅಲ್ಲಮಪ್ರಭು ದೇಶಮುಖ, ಟಿ.ವಿಶಿವಾನಂದನ್ ಇತರರಿದ್ದರು.