ನಂಜನಗೂಡು ತಾಲೂಕು ದಾಸನೂರು ಗ್ರಾಮದ ನಲ್ಲಿಗಳಿಗೆ ನೀರು ಬಾರದ ಹಿನ್ನೆಲೆ ತೊಂಬೆಗಳಲ್ಲಿ ನೀರು ತರುತ್ತಿರುವ ದೃಶ್ಯ. 
ಜಿಲ್ಲೆ

ದಾಸನೂರಿನಲ್ಲಿ ಜೀವಜಲಕ್ಕೆ ಹಾಹಾಕಾರ

ಲೋಕೇಶ್ ಮನು. ಡಿ

ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ, ನಂಜನಗೂಡು ತಾಲೂಕಿನ ದಾಸನೂರು ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ಜೀವಜಲಕ್ಕಾಗಿ ಗ್ರಾಮಸ್ಥರು ಹಾಹಾಕಾರ ಪಡುವಂತಾಗಿದೆ.

ದಾಸನೂರು ಗ್ರಾಮದಲ್ಲಿ 3 ಸಾವಿರ ಜನಸಂಖ್ಯೆ ಇದೆ. 2 ಓವರ್‌ಹೆಡ್ ಟ್ಯಾಂಕ್ ಇದ್ದರೂ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕಪಿಲಾ ನದಿಯಿಂದ ಶುದ್ಧೀಕರಿಸಿ ಬರುವ ನೀರು ಸ್ಥಗಿತಗೊಂಡು ಸುಮಾರು ದಿನಗಳೇ ಕಳೆದಿದೆ. ದಾಸನೂರು ಸೇರಿದಂತೆ ದೊಡ್ಡಹೊಮ್ಮ, ಚಿಕ್ಕಹೊಮ್ಮ, ಕಾರೇಮೊಳೆ, ತೊರವಳ್ಳಿ, ಅಂಕುಶರಾಯನಪುರ, ತೊರವಳ್ಳಿ ಮೊಳೆ ಗ್ರಾಮಗಳಲ್ಲಿಯೂ ನೀರಿಗಾಗಿ ತತ್ವಾರ ಉಂಟಾಗಿದೆ. ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸದೆ ಕೆಟ್ಟು ನಿಂತಿದೆ. ದಿನಬಳಕೆಗಷ್ಟೇ ಅಲ್ಲ ಕುಡಿಯಲೂ ಶುದ್ಧವಾದ ನೀರುವ ದೊರೆಯಂತಾಗಿದೆ.

ತೊಂಬೆ ನಲ್ಲಿಗಳಿಗೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಕುಡಿಯುವ ನೀರನ್ನು ನಾಲ್ಕು ದಿನಕ್ಕೆ ಒಮ್ಮೆ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಗ್ರಾಮದಲ್ಲಿ ಜನ ಮತ್ತು ಜಾನುವಾರುಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಎರಡ್ಮೂರು ತಿಂಗಳಿನಿಂದಲೂ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ.

ಮನವಿ ಮಾಡಿದರರೂ ಪ್ರಯೋಜನವಿಲ್ಲ: ಸ್ಥಗಿತಗೊಂಡಿರುವ ಕಪಿಲಾ ನದಿ ನೀರನ್ನು ಸರಬರಾಜು ಮಾಡಬೇಕು. ಕೆಟ್ಟು ನಿಂತಿರುವ ಗೇಟ್‌ವಾಲ್ವ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಿಸುವಂತೆ ಗ್ರಾಮ ಪಂಚಾಯಿತಿಗೆ ಎಷ್ಟೇ ಬಾರಿ ಮನವಿ ಮಾಡಿದರರೂ ಪ್ರಯೋಜನವಾಗಿಲ್ಲ. ಕುಡಿಯುವ ನೀರು ಪೂರೈಸುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ವಿಫಲವಾಗಿದೆ. ಹೆಸರಿಗಷ್ಟೇ ಮುಖ್ಯಮಂತ್ರಿಗಳ ಕ್ಷೇತ್ರವಾಗಿದೆ. ಆದರೆ ಯಾವುದೇ ಪ್ರಯೋಜನವಿಲ್ಲ. ಇನ್ನಾದರೂ ತಾಲೂಕು ಆಡಳಿತ ಎಚ್ಚೆತ್ತು ಸಮರ್ಪಕವಾಗಿ ನೀರನ್ನು ಪೂರೈಕೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.