ಜಿಲ್ಲೆ

ದಾಸನಪುರ ಬೆಟ್ಟದ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ

ಅರಕಲಗೂಡು: ಇತಿಹಾಸ ಪ್ರಸಿದ್ಧ ತಾಲೂಕಿನ ಮಣಜೂರು- ದಾಸನಪುರ ಬೆಟ್ಟದ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಶನಿವಾರ ಭಕ್ತರ ಮಹಾಪೂರವೇ ಹರಿದುಬಂತು.


ಗೊರೂರು ಹೇಮಾವತಿ ಜಲಾಲಯದ ಹಿನ್ನೀರು ಪರಿಸರದ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ರಂಗನಾಥಸ್ವಾಮಿ ಸನ್ನಿಧಿಯಲ್ಲಿ ಜನಜಾತ್ರೆಯೇ ನೆರೆದಿತ್ತು. ಸುತ್ತಮುತ್ತಲಿನ ಹಳ್ಳಿಗಳ ಸಹಸ್ರಾರು ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.


ಬೆಟ್ಟದ ಮೇಲಿನ ದೇವಸ್ಥಾನದಲ್ಲಿ ಮೂಲ ದೇವರ ವಿಗ್ರಹಕ್ಕೆ ಬಗೆ ಬಗೆಯ ಹೂವುಗಳಿಂದ ಅಲಂಕರಿಸಿ ಬೆಳಗ್ಗೆ ದೇವರಿಗೆ ಅಭಿಷೇಕ, ವಿಶೇಷ ಪೂಜಾ ವಿಧಾನಗಳನ್ನು ಪೂರೈಸಲಾಯಿತು. ಭಕ್ತರು ಬೆಟ್ಟವೇರಿ ದೇವಸ್ಥಾನದ ಸುತ್ತ ಸುಡು ಬಿಸಿಲನ್ನು ಲೆಕ್ಕಿಸದೆ ಸರದಿ ಸಾಲಿನಲ್ಲಿ ಆಗಮಿಸಿ ಹಣ್ಣು ಕಾಯಿ ಪೂಜೆ ಅರ್ಪಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪುನೀತರಾದರು.


ಬಿಜೆಪಿ ಮುಖಂಡ ಸಿ.ಡಿ. ದಿವಾಕರ್‌ಗೌಡ ಅವರು ಜಾತ್ರಗೆ ಬಂದಿದ್ದ ಸಾವಿರಾರು ಭಕ್ತರಿಗೆ ಊಟದ ವ್ಯವಸ್ಥೆ ಮಾಡಿದ್ದರು. ಊಟಕ್ಕಾಗಿ ಸಾಲಿನಲ್ಲಿ ಬರುತ್ತಿದ್ದ ಭಕ್ತರಿಗೆ ಗ್ರಾಪಂ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ, ದಿವಾಕರ್‌ಗೌಡ ಹಾಗೂ ಸ್ವಯಂ ಸೇವಕರು ಊಟ ಬಡಿಸಿ ನೂಕು ನುಗ್ಗಲು ನಿಯಂತ್ರಿಸಲು ಸಹಕರಿಸಿದರು. ಕಾಂಗ್ರೆಸ್ ಮುಖಂಡ ಎಂ.ಟಿ. ಕೃಷ್ಣೇಗೌಡ ಅವರ ಅಭಿಮಾನಿಗಳು ಮಜ್ಜಿಗೆ ವಿತರಿಸಿ ಬಿಸಿಲಿನಿಂದ ಬಳಲಿದ್ದ ಜನರಿಗೆ ಬಾಯಾರಿಕೆ ನಿವಾರಿಸುವ ಕೆಲಸ ಮಾಡಿದರು.


ಜಾತ್ರೆಗೆ ಬಂದಿದ್ದ ಭಕ್ತರು ಬೆಟ್ಟದದ ಮೇಲೆ ನಿಂತು ಕಾಣುವ ಸುಂದರ ಪರಿಸರ, ಹೇಮಾವತಿ ಜಲಾಯಶದ ಹಿನ್ನೀರು, ಸಾಲು ಬೆಟ್ಟಗಳ ಸುಂದರ ವಾತಾವರಣವನ್ನು ಕಣ್ತುಂಬಿಕೊಂಡು ಆನಂದಿಸಿದರು. ವಿವಿಧ ವ್ಯಾಪಾರಿಗಳು ಜಾತ್ರೆಯಲ್ಲಿ ವ್ಯಾಪಾರ ಜೋರಾಗಿ ಸಾಗಿತ್ತು. ಜಾತ್ರೆಯಲ್ಲಿ ಸಡಗರ, ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.