ದಾವಣಗೆರೆ: ನಗರದ ಎಸ್ ಎಸ್ ಆಸ್ಪತ್ರೆ ಬೈಪಾಸ್ ರಸ್ತೆ (ದಾವಣಗೆರೆ ಹೆರಿಟೇಜ್ ವಸತಿಗೃಹ) ಬಳಿ ಶುಕ್ರವಾರ ಸಂಜೆ ಸಂಭವಿಸಿದ
ಭೀಕರ ಸರಣಿ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ.
ಮೃತರನ್ನು ಶುಭಾ ಎಂದು ಗುರುತಿಸಲಾಗಿದೆ. ಎಸ್ ಎಸ್ ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿ ರೋಗಿಯೊಬ್ಬರಿಗೆ ಊಟ ಕೊಡಲು ಹೊರಟಿದ್ದಾಗ ಅವರಿದ್ದ ಸ್ಕೂಟಿಗೆ ಕಾರು ಡಿಕ್ಕಿಯಾಗಿದೆ.ಅಪಘಾತದ ರಭಸಕ್ಕೆ ಮಹಿಳೆ ಸ್ಥಳದಲ್ಲೇ ಅಸು ನೀಗಿದ್ದಾರೆ.
ಹರಿಹರ ಕಡೆಯಿಂದ ಬರುತ್ತಿದ್ದ ಕಾರು ಅದೇ ವೇಗದಲ್ಲಿ ಸೇವಾ ರಸ್ತೆಗೆ ತಿರುವು ಪಡೆಯಲು ಹೋದಾಗಟೈರ್ ಸಿಡಿದು ಕಾರು ನಿಯಂತ್ರಣ ತಪ್ಪಿ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ನಂತರ ಅದೇ ಕಾರು ಮತ್ತೆರಡು ಕಾರುಗಳಿಗೂ ಡಿಕ್ಕಿ ಹೊಡೆಯಿತೆನ್ನಲಾಗಿದೆ.
ಕಾರಿನಲ್ಲಿದ್ದವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾವಣಗೆರೆ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.