ದಾವಣಗೆರೆ: ನಗರದ ವಿಜಯಲಕ್ಷ್ಮೀ ರಸ್ತೆಯ ಪವನ್ ಜ್ಯೂಯಲರ್ಸ್‌ನಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಬಸವನಗರ ಠಾಣೆ ಪೊಲೀಸರು, 18 ಲಕ್ಷ ರೂ. ಮೌಲ್ಯದ 48 ಕೆಜಿ ಬೆಳ್ಳಿ ಗಟ್ಟಿ ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರ ಮೂಲದ, ಕಲಬುರಗಿ ಜಿಲ್ಲೆ ಬಬಲಾದ ಗ್ರಾಮದ ನಿವಾಸಿ ಜೀಬನ್ ಸಿಂಗ್ ಶಂಕರ್ ಸಿಂಗ್ ಬಂಧಿತ ಆರೋಪಿ.
ಸೆ.9ರ ತಡರಾತ್ರಿ ಅಂಗಡಿಯ ಶಟರ್ಸ್ ಮುರಿದು ಸುಮಾರು 60 ಕೆ ಜಿ ಬೆಳ್ಳಿ, 10 ಗ್ರಾಂ ಬಂಗಾರ, 2500 ನಗದು ಕಳವು ಮಾಡಲಾಗಿದೆ ಎಂದು ಅಂಗಡಿ ಮಾಲೀಕ ಕೆ.ಟಿ.ಕಿಶೋರ್‌ಕುಮಾರ್ ದೂರು ನೀಡಿದ್ದರು.
ಬಸವನಗರ ಪೊಲೀಸ್ ಠಾಣೆಯ ಪಿಐ ಎಚ್.ಗುರುಬಸವರಾಜ ನೇತೃತ್ವದಲ್ಲಿ ಪಿಎಸ್‌ಐಗಳಾದ ಜಿ. ನಾಗರಾಜ, ಮಂಜುನಾಥ ಕಲ್ಲೇದೇವರು ಹಾಗೂ ಅವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು.
ವಿಚಾರಣೆ ವೇಳೆ ಆರೋಪಿ ತಿಳಿಸಿದಂತೆ, ಕಳವು ಮಾಲು ಖರೀದಿಸಿದ್ದ ರಾಣೆಬೆನ್ನೂರಿನ ಬೆಳ್ಳಿ-ಬಂಗಾರದ ಅಂಗಡಿ ಮಾಲೀಕ, ಬೆಳ್ಳಿಯನ್ನು ಕರಗಿಸಿದ್ದು, ಆತನಿಂದ ಕಚ್ಚಾ ಬೆಳ್ಳಿ ಗಟ್ಟಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ತೆ ಮಾಡಿದ ತಂಡದ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.
ಹೊರರಾಜ್ಯಗಳಲ್ಲೂ ಕೇಸ್
ಆರೋಪಿಯು 20 ವರ್ಷಗಳಿಂದ ಕಳ್ಳತನ ವೃತ್ತಿ ಮಾಡುತ್ತಿದ್ದ. ವಿಶೇಷವಾಗಿ ಬಟ್ಟೆ ಅಂಗಡಿಗಳಲ್ಲಿ ಕಳವು ಮಾಡುತ್ತಿದ್ದ. ಮೊದಲ ಬಾರಿ ಆಭರಣ ಅಂಗಡಿಯಲ್ಲಿ ಕಳ್ಳತನ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.
ಆರೋಪಿ ವಿರುದ್ಧ ಬಸವನಬಾಗೇವಾಡಿ, ತಾಳಿಕೋಟೆಯಲ್ಲಿ ಅಲ್ಲದೇ ಹೊರ ರಾಜ್ಯದಲ್ಲೂ ಸಹ ಪ್ರಕರಣಗಳು ದಾಖಲಾಗಿದೆ. ಮೂರನೇ ಬಾರಿಗೆ ಕಂಬಿ ಎಣಿಸುತ್ತಿದ್ದಾನೆ.